ನವದೆಹಲಿ, ಡಿ 22 (DaijiworldNews/MS): ಭಾರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ 10,635 ಅರ್ಜಿದಾರರಲ್ಲಿ ಶೇಕಡಾ 70 ರಷ್ಟು ಅರ್ಜಿಗಳು ಅಂದರೆ 7,306 ಅರ್ಜಿಗಳು ಪಾಕಿಸ್ತಾನಿಯರಿಂದ ಬಂದಿವೆ ಎಂದು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ನೀಡಿರುವ ಅಂಕಿಅಂಶದಲ್ಲಿ ತಿಳಿಸಿದೆ.
ಪೌರತ್ವದ ಡೇಟಾ ಸೇರಿದಂತೆ ಭಾರತೀಯ ಪೌರತ್ವಕ್ಕಾಗಿ ಪ್ರಸ್ತುತ ಅರ್ಜಿದಾರರ ವಿವರಗಳಿಗೆ ಸಂಬಂಧಿಸಿ ಸಂಸತ್ ಸದಸ್ಯ ಅಬ್ದುಲ್ ವಹಾಬ್ ಅವರು ಬುಧವಾರ ಕೇಳಿದ ಪ್ರಶ್ನೆಗೆ ಉತ್ತರಿಸಿದ ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ ರಾಯ್ ಈ ಮಾಹಿತಿ ನೀಡಿದ್ದಾರೆ.
2021ರ ಡಿಸೆಂಬರ್ 14ರವರೆಗೆ ಭಾರತೀಯ ಪೌರತ್ವಕ್ಕಾಗಿ ಸುಮಾರು 10,635 ಅರ್ಜಿಗಳು ಬಂದಿದ್ದು, ಇದರಲ್ಲಿ 7,306 ಪಾಕಿಸ್ತಾನದಿಂದ 1,152 ಅಫ್ಘಾನಿಸ್ತಾನ್, ಶ್ರೀಲಂಕಾ ಮತ್ತು ಯುಎಸ್ ಎನಿಂದ 223, ನೇಪಾಳದಿಂದ 189, ಬಾಂಗ್ಲಾದೇಶದಿಂದ 161 ಹಾಗೂ ಸ್ಟೇಟ್ ಲೆಸ್(ರಾಜ್ಯರಹಿತ)ನಿಂದ 428 ಅರ್ಜಿಗಳು ಬಂದಿರುವುದಾಗಿ ಮಾಹಿತಿ ನೀಡಿದ್ದಾರೆ.
ಇದಲ್ಲದೆ ಚೀನಾದಿಂದಲೂ ಸುಮಾರು 10 ಮಂದಿ ಅರ್ಜಿದಾರರು ಭಾರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಗಳನ್ನು ವಿವರವಾಗಿ ಪರಿಶೀಲನೆ ನಡೆಸಿದ ನಂತರ ಅರ್ಜಿಯನ್ನು ಪೌರತ್ವ ನೀಡುವ ಬಗ್ಗೆ ಅನುಮೋದಿಸಲಾಗುತ್ತದೆ.