ಪಟ್ನಾ, ಡಿ.22 (DaijiworldNews/HR): ಎರಡು ತಿಂಗಳ ಹಿಂದೆ ಮೃತಪಟ್ಟ ಮಹಿಳೆಯೊಬ್ಬರಿಗೆ ಕೊರೊನಾ ಲಸಿಕೆ ಎರಡನೇ ಡೋಸ್ ನೀಡಿರುವುದು ಯಶಸ್ವಿಯಾಗಿದೆ ಎನ್ನುವ ಸಂದೇಶ ಬಂದಿದ್ದು, ಆಕೆಯ ಪತಿ ಸಂದೇಶ ನೋಡಿ ಆಶ್ಚರ್ಯಕ್ಕೀಡಾಗಿದ್ದಾರೆ.
ಸಾಂದರ್ಭಿಕ ಚಿತ್ರ
ಈ ಕುರಿತು ಮಾಹಿತಿ ನೀಡಿರುವ ರಾಮ್ ಉದ್ಗಾರ್, ನನ್ನ ಹೆಂಡತಿ ಲಾಲೊ ದೇವಿ ಅನಾರೋಗ್ಯದಿಂದಾಗಿ ಸೆಪ್ಟೆಂಬರ್ 9 ರಂದು ಮೃತಪಟ್ಟಿದ್ದು, ಬಿಹಾರದ ಯೋಜನೆ ಮತ್ತು ಅಭಿವೃದ್ಧಿ ಇಲಾಖೆಯು ಮರಣ ಪ್ರಮಾಣಪತ್ರವನ್ನು ನೀಡಿದೆ. ಹೀಗಿದ್ದರೂ ಆಕೆ ಮೃತಪಟ್ಟು ಎರಡು ತಿಂಗಳಾದ ಮೇಲೆ ಈಗ ಆರೋಗ್ಯ ಇಲಾಖೆಯಿಂದ ಕೊರೊನಾ ಲಸಿಕೆ ಪ್ರಣಮಾಣಪತ್ರ ಲಭ್ಯವಾಗಿದೆ್ ಎಂದು ತಿಳಿಸಿದ್ದಾರೆ.
ಇನ್ನು ನವೆಂಬರ್ 25 ರಂದು ವೀರಪುರದ ಪ್ರಾಥಮಿಕ ಆರೋಗ್ಯ ಕೇಂದ್ರವು ಕಿಸಾನ್ ಭವನದ ಬಳಿ ಕೊರೊನಾ ಲಸಿಕಾ ಕ್ಯಾಂಪ್ ಅನ್ನು ಆಯೋಜಿಸಿತ್ತು. ಅದಾದ ಬಳಿಕ ಆರೋಗ್ಯ ಅಧಿಕಾರಿಗಳು ಲಾಲೊ ದೇವಿ ಹೆಸರಲ್ಲಿ ಕೋವಿಡ್ ಲಸಿಕಾ ಸರ್ಟಿಫಿಕೇಟ್ ಅನ್ನು ನೀಡಿದ್ದಾರೆ.
ಸತ್ತ ವ್ಯಕ್ತಿಯೊಬ್ಬರಿಗೆ ನೀಡಿರುವ ಕೋವಿಡ್ ಲಸಿಕೆ ಪ್ರಮಾಣಪತ್ರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ಲೋಡ್ ಮಾಡಲಾಗಿದ್ದು, ವೈರಲ್ ಆಗಿದೆ.