ಬೆಂಗಳೂರು, ಡಿ.22 (DaijiworldNews/HR): ಕನ್ನಡಿಗರ ಮೇಲೆ ನಿರಂತರ ದೌರ್ಜನ್ಯವೆಸಗುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್)ಯನ್ನು ನಿಷೇಧಿಸಲೇಬೇಕು ಎಂದು ಒತ್ತಾಯಿಸಿ ಡಿಸೆಂಬರ್ 31 ರಂದು ಕನ್ನಡ ಒಕ್ಕೂಟ ಕರ್ನಾಟಕ ಬಂದ್ಗೆ ಕರೆ ಕೊಟ್ಟಿದೆ.
ಈ ಕುರಿತು ವಾಟಾಳ್ ನಾಗರಾಜ್ ಮಾತನಾಡಿ, "ಇದು ಕರ್ನಾಟಕದ ಸ್ವಾಭಿಮಾನದ ಪ್ರಶ್ನೆಯಾಗಿದ್ದು, ರಾಜ್ಯ ಸರ್ಕಾರ ದೇಶದ್ರೋಹದ ಪ್ರಕರಣ ದಾಖಲಿಸುತ್ತೇವೆ. ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಕಳುಹಿಸುತ್ತೇವೆ ಎಂಬೆಲ್ಲ ತೀರ್ಮಾನಗಳನ್ನು ನಾವು ಒಪ್ಪುವುದಿಲ್ಲ. ಕಳೆದ 70 ವರ್ಷಗಳಿಂದ ಎಂಇಎಸ್ ಸಂಘಟನೆ ಕನ್ನಡಿಗರ ಮೇಲೆ ನಿರಂತರ ದೌರ್ಜನ್ಯ ಮಾಡುತ್ತಿದೆ. ಕನ್ನಡ ಧ್ವಜ ಸುಟ್ಟು ಕನ್ನಡಿಗರಿಗೆ ಅಪಮಾನ ಮಾಡಿದ್ದು, ಇದನ್ನು ನಿಷೇಧಿಸಲೇಬೇಕು" ಎಂದು ಒತ್ತಾಯಿಸಿದ್ದಾರೆ.
ಇನ್ನು ಡಿ.29ರ ವರೆಗೆ ರಾಜ್ಯ ಸರ್ಕಾರಕ್ಕೆ ಗಡುವು ನೀಡುತ್ತೇವೆ. ಅಷ್ಟರೊಳಗೆ ಸರ್ಕಾರ ತೀರ್ಮಾನ ಕೈಗೊಳ್ಳಬೇಕು. ಇಲ್ಲದಿದ್ದರೆ 31ರಂದು ನಾವು ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದರು.
ಸಾ.ರಾ.ಗೋವಿಂದು ಮಾತನಾಡಿ, "ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಬೆಳಗಾವಿ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಸೇಂದಂತೆ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತರುವ ಕೆಲಸವನ್ನು ಎಂಇಎಸ್ ಸಂಘಟನೆ ನಿರಂತರವಾಗಿ ಮಾಡುತ್ತಲೇ ಬಂದಿದೆ" ಆರೋಪಿಸಿದ್ದಾರೆ.
ಇನ್ನು ಜಿಲ್ಲೆಯ ಗಡಿಯಲ್ಲಿ ಶಿವಸೇನೆಯ ಪುಂಡಾಟ ಮತ್ತೆ ಮುಂದುವರೆದಿದ್ದು, ಬೆಳಗಾವಿ-ಮಹಾರಾಷ್ಟ್ರ ಗಡಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಅಣಕು ಶವಯಾತ್ರೆಯನ್ನು ನಡೆಸಿದಂತ ಶಿವಸೇನೆ ಕಾರ್ಯಕರ್ತರು, ಪತಿಕೃತಿ ಧಹನ ಮಾಡಿ, ಪುಂಡಾಟ ಮೆರೆದಿರುವ ಘಟನೆ ಕೂಡ ನಡೆದಿದೆ.