ಚಂಡೀಗಢ, ಡಿ 22 (DaijiworldNews/MS): ಯಾವುದೇ ಸಮುದಾಯದವರು ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಪ್ರಾರ್ಥನೆಗಳನ್ನು ನಡೆಸುವಂತಿಲ್ಲ ಎಂದು ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಮಂಗಳವಾರ ವಿಧಾನಸಭೆಯಲ್ಲಿ ಹೇಳಿದ್ದಾರೆ.
ಗುರುಗ್ರಾಮದಲ್ಲಿ ಸಾರ್ವಜನಿಕ ಸ್ಥಳವೊಂದರಲ್ಲಿ ಮುಸ್ಲಿಮರು ಶುಕ್ರವಾರದ ಪ್ರಾರ್ಥನೆಗೆ ಹಿಂದೂ ಗುಂಪುಗಳ ಆಕ್ಷೇಪಣೆ ಎತ್ತಿದ ವಿಚಾರವಾಗಿ ಸಿಎಂ ಈ ಹೇಳಿಕೆ ನೀಡಿದ್ದಾರೆ
ಎಲ್ಲಾ ಧರ್ಮಗಳ ಜನರಿಗಾಗಿ ಧಾರ್ಮಿಕ ಸ್ಥಳಗಳಾದ ದೇವಾಲಯಗಳು, ಮಸೀದಿಗಳು, ಗುರುದ್ವಾರಗಳು ಮತ್ತು ಚರ್ಚ್ಗಳಂತಹ ಅಧಿಕೃತ ಸ್ಥಳಗಳಲ್ಲಿ ಪ್ರಾರ್ಥನೆಗಳನ್ನು ನಡೆಸುತ್ತಾರೆ. ಇದಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಊರೂಸ್, ರಾಮ್ ಲೀಲಾ ಮುಂತಾದ ದೊಡ್ದ ಹಬ್ಬಗಳ ಕಾರ್ಯಕ್ರಮಗಳಿಗೆ ಮುಕ್ತವಾಗಿ ಅನುಮತಿ ನೀಡಲಾಗಿದೆ ಎಂದು ಹೇಳಿದ್ದಾರೆ
ಸದನದಲ್ಲಿ ಶೂನ್ಯ ವೇಳೆಯಲ್ಲಿ ಕಾಂಗ್ರೆಸ್ ಶಾಸಕ ಅಫ್ತಾಬ್ ಅಹ್ಮದ್ ಅವರು ಹಿಂದೂ ಗುಂಪುಗಳ ಆಕ್ಷೇಪದ ವಿಷಯವನ್ನು ಎತ್ತಿದಾಗ ಸಿಎಂ ಪ್ರತಿಕ್ರಿಯಿಸಿ ಮಾತನಾಡಿ ಇನ್ನೊಂದು ಸಮುದಾಯದವರ ಭಾವನೆಗಳನ್ನು ಕೆರಳಿಸಲೆಂದು ತಮ್ಮ ಬಲ ಪ್ರದರ್ಶನ ಮಾಡಿ ಪ್ರಚೋದಿಸುವುದು ಸೂಕ್ತವಲ್ಲ ಎಂದು ಹೇಳಿದರು.