ಬೆಂಗಳೂರು, ಡಿ 22 (DaijiworldNews/MS): ಬಲವಂತದ ಮತಾಂತರ ತಡೆಗಾಗಿ ರಾಜ್ಯ ಸರ್ಕಾರ ಮಂಡಿಸಿರುವ ಮಸೂದೆಯ ಪ್ರತಿಯನ್ನು ಡಿ.ಕೆ ಶಿವಕುಮಾರ್ ಹರಿದು ಹಾಕಿರುವ ವಿಚಾರವಾಗಿ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ, ಇದೆಲ್ಲಾ ಮಾಡಿರುವುದು ಅಧಿನಾಯಕಿ ಆಂಟೋನಿಯೋ ಮೈನೋ ಮೆಚ್ಚುಗೆ ಗಳಿಸುವುದಕ್ಕಾಗಿಯೇ? ಎಂದು ಪ್ರಶ್ನಿಸಿದೆ.
ಈ ಬಗ್ಗೆ ಬಿಜೆಪಿ ಘಟಕವು ತನ್ನ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು, "ಮಾನ್ಯ ಡಿ.ಕೆ ಶಿವಕುಮಾರ್ ಅವರೇ, ನೀವು ಸದನದಲ್ಲಿ ಮತಾಂತರ ನಿಷೇಧ ಮಸೂದೆ ಪ್ರತಿಯನ್ನು ಹರಿದು ಹಾಕಿದಿರಿ.ಏಕೆಂದರೆ ನಿಮಗಾಗಲಿ, ನಿಮ್ಮ ಅಧಿನಾಯಕ ರಾಹುಲ್ ಗಾಂಧಿಯವರಿಗಾಗಲಿ ಸಂಸದೀಯ ವ್ಯವಸ್ಥೆ ಹಾಗೂ ನಡಾವಳಿಯಲ್ಲಿ ನಂಬಿಕೆಯೇ ಇಲ್ಲ.ಎಷ್ಟಾದರೂ, ತುರ್ತು ಪರಿಸ್ಥಿತಿ ಹೇರಿದ ರಾಜಕೀಯ ಕುಟುಂಬದ ಹಿಂಬಾಲಕರಲ್ಲವೇ ನೀವು ಎಂದು ಟೀಕಿಸಿದೆ.
"ಕಾಂಗ್ರೆಸ್ ನಾಯಕರು ತಮಗೆ ಅನುಕೂಲಕರ ವಾತಾವರಣ ಇಲ್ಲವೆಂದಾದರೆ ವಿಧೇಯಕದ ಪ್ರತಿಯಷ್ಟೇ ಅಲ್ಲ, ಸದನದ ನಿಯಮಾವಳಿಗಳನ್ನೇ ಹರಿದು ಬಿಸಾಡಬಲ್ಲರು. ಏಕೆಂದರೆ ಡಿ.ಕೆ ಶಿವಕುಮಾರ್ ಅವರಂತವರಿಗೆ ಸದನ, ವ್ಯವಸ್ಥೆ, ನಿಯಮ ಇತ್ಯಾದಿಗಳ ಮೇಲೆ ಗೌರವವೇ ಇಲ್ಲ.ಹೇಗಾದರೂ ಮಾಡಿ ಸೋನಿಯಾ ಗಾಂಧಿಯ ಮೆಚ್ಚುಗೆ ಗಳಿಸಬೇಕೆಂಬುದಷ್ಟೇ ಅವರ ನಿಮ್ಮ ಧ್ಯೇಯ" ಎಂದು ಆರೋಪಿಸಿದೆ
ಡಿಕೆಶಿ ಅವರು ಕನಕಪುರದ ಬೆಟ್ಟದ ಮೇಲೆ ಸಂಬಂಧವೇ ಇಲ್ಲದ ವಿಗ್ರಹವೊಂದನ್ನು ಸ್ಥಾಪನೆ ಮಾಡಲು ಹೊರಟಿದ್ದರು. ಇದೆಲ್ಲ ಯಾರನ್ನು ಓಲೈಸುವುದಕ್ಕಾಗಿ? ಅಧಿನಾಯಕಿ ಆಂಟೋನಿಯೋ ಮೈನೋ ಮೆಚ್ಚುಗೆ ಗಳಿಸುವುದಕ್ಕಾಗಿಯೇ? ಡಿಕೆಶಿ ಅವರೇ, ನಿಮಗೆ ಸ್ವಧರ್ಮ, ರಾಷ್ಟ್ರಧರ್ಮದ ಮೇಲೆ ಕಿಂಚಿತ್ತಾದರೂ ನಂಬಿಕೆ ಇದೆಯೇ?" ಎಂದು ಪ್ರಶ್ನಿಸಿದೆ.