ಚಿಕ್ಕಬಳ್ಳಾಪುರ, ಡಿ.22 (DaijiworldNews/HR): ಇಂದು ಬೆಳಗ್ಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಹಲವೆಡೆ ಸ್ಫೋಟದ ಅನುಭವವಾಗಿದ್ದು, ಭಾರಿ ಸ್ಫೋಟದ ಸದ್ದು ಕೇಳಿ ಜನ ಆತಂಕಕ್ಕೆ ಒಳಗಾಗಿರುವ ಘಟನೆ ನಡೆದಿದೆ.
ಸಾಂದರ್ಭಿಕ ಚಿತ್ರ
ಈ ಕುರಿತು ಎನ್ಎಸ್ಸಿ ಟ್ವೀಟ್ ಮಾಡಿ ಮಾಹಿತಿ ನೀಡಿದ್ದು, ಡಿಸೆಂಬರ್ 22 ರಂದು ಬೆಳಿಗ್ಗೆ 7.09ರ ವೇಳೆಗೆ 3.1 ತೀವ್ರತೆಯ ಭೂಕಂಪನ ಸಂಭವಿಸಿದ್ದು, ಬೆಂಗಳೂರಿನ ಉತ್ತರ, ಈಶಾನ್ಯ ಭಾಗದ 70 ಕಿಮೀ ದೂರದಲ್ಲಿ 11 ಕಿಮೀ ಆಳದಲ್ಲಿ ಭೂಕಂಪನ ಉಂಟಾಗಿದೆ. ಇದಾಗಿ ಐದು ನಿಮಿಷದಲ್ಲಿಯೇ ಮತ್ತೊಮ್ಮೆ ಭೂಕಂಪನ ಉಂಟಾಗಿ ಅದರ ತೀವ್ರತೆ ಹೆಚ್ಚಿತ್ತು. ಬೆಂಗಳೂರು ಉತ್ತರ- ಈಶಾನ್ಯ ಭಾಗದ 66 ಕಿಮೀ ದೂರದಲ್ಲಿ 23 ಕಿಮೀ ಆಳದಲ್ಲಿ ಬೆಳಿಗ್ಗೆ 7.14ರ ಸುಮಾರಿಗೆ 3.3 ತೀವ್ರತೆಯಲ್ಲಿ ಭೂಮಿ ನಡುಗಿದೆ ಎಂದು ತಿಳಿಸಿದೆ.
ಇನ್ನು ಚಿಕ್ಕಬಳ್ಳಾಪುರ ತಾಲೂಕಿನ ಪಿಲ್ಲಗುಂಡ್ಲಹಳ್ಳಿ, ರೆಡ್ಡಿ ಗೊಲ್ಲವಾರಹಳ್ಳಿ, ಶೆಟ್ಟಿಗೆರೆ, ಬೈಯಪ್ಪನಹಳ್ಳಿ, ಆದನ್ನಗಾರಹಳ್ಳಿ, ಪೆರೇಸಂದ್ರ ಗ್ರಾಮದ ಸುತ್ತಮುತ್ತ ಸ್ಫೋಟದ ಸದ್ದು ಕೇಳಿ ಬಂದಿದ್ದು, 2 ಬಾರಿ ಭೂಮಿ ಕಂಪಿಸಿ ಲಘು ಭೂಕಂಪವಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಮಾನಿಟರಿಂಗ್ ಕೇಂದ್ರ ಮಾಹಿತಿ ನೀಡಿದೆ.