ನವದೆಹಲಿ, ಡಿ 22 (DaijiworldNews/MS): ಒಮಿಕ್ರಾನ್ ರೂಪಾಂತರವು ಡೆಲ್ಟಾಕ್ಕಿಂತ ಕನಿಷ್ಠ ಮೂರು ಪಟ್ಟು ಹೆಚ್ಚು ವೇಗವಾಗಿ ಹರಡುತ್ತದೆ ಎಂದು ಇದುವರೆಗಿನ ಡೇಟಾಗಳು ಸೂಚಿಸುತ್ತವೆ ಎಂದು ಎಂದು ರಾಜ್ಯಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಎಚ್ಚರಿಸಿದೆ.
ಇದಲ್ಲದೆ ಓಮಿಕ್ರಾನ್ ನಿಂದ ಬಾಧಿತರಾಗುವ ಜನಸಂಖ್ಯೆಯ ಬಗ್ಗೆ ಡೇಟಾವನ್ನು ಸಂಗ್ರಹಿಸುವುದಕ್ಕಾಗಿ ಕೋವಿಡ್-19 ವಾರ್ ರೂಮ್ ಗಳನ್ನು ಪುನಾರಂಭಗೊಳಿಸಲು ರಾಜ್ಯಗಳಿಗೆ ಆರೋಗ್ಯ ಸಚಿವಾಲಯ ಸೂಚನೆ ನೀಡಿದೆ.
ಭಾರತದಲ್ಲಿ ಕೋವಿಡ್ 19 ಪ್ರಕರಣಗಳ ಉಲ್ಬಣದ ಆರಂಭಿಕ ಚಿಹ್ನೆಗಳು ಮತ್ತು ದೇಶದ ವಿವಿಧ ಭಾಗಗಳಲ್ಲಿ ಓಮಿಕ್ರಾನ್ ರೂಪಾಂತರದ ಹೆಚ್ಚಿದ ಪತ್ತೆಹಚ್ಚುವಿಕೆಯ ದೃಷ್ಟಿಯಿಂದ ಇದು ಅಗತ್ಯವಾಗಿದೆ ಎಂದು ಸರ್ಕಾರ ಹೇಳಿದೆ.
ಮಂಗಳವಾರ, ಒಡಿಶಾ ಕೂಡ ದೃಢಪಡಿಸಿದ ಓಮಿಕ್ರಾನ್ ಪ್ರಕರಣಗಳನ್ನು ಹೊಂದಿರುವ ರಾಜ್ಯಗಳ ಪಟ್ಟಿಗೆ ಸೇರಿದೆ. ಹೀಗಾಗಿ ದೇಶಾದ್ಯಂತ ಒಟ್ಟು ಪ್ರಕರಣಗಳು 202ಕ್ಕೆ ಏರಿಕೆಯಾಗಿದೆ.
ಕೇಂದ್ರ ಆರೋಗ್ಯ ಸಚಿವಾಲಯ ಎಲ್ಲಾ ಮುಖ್ಯಕಾರ್ಯದರ್ಶಿಗಳಿಗೂ ಪತ್ರ ಬರೆಯಲಾಗಿದ್ದು, ಜಿಲ್ಲಾ ಕೇಂದ್ರಗಳಲ್ಲಿ ಕೋವಿಡ್ 19 ನಿಂದ ಪೀಡಿತ ಜನಸಂಖ್ಯೆ, ಭೌಗೋಳಿಕ ಹರಡುವಿಕೆ, ಆಸ್ಪತ್ರೆ ಮೂಲಸೌಕರ್ಯ, ಬಳಕೆ, ಮಾನವಸಂಪನ್ಮೂಲ, ಕಂಟೈನ್ಮೆಂಟ್ ಝೋನ್ ಗಳಿಗೆ ಸಂಬಂಧಿಸಿದ ಡೇಟಾಗಳ ಪರಿಶೀಲನೆ ನಡೆಯಬೇಕು ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಪತ್ರದಲ್ಲಿ ತಿಳಿಸಿದ್ದಾರೆ. ಒಂದು ವಾರದಲ್ಲಿ ಶೇ.10 ರಷ್ಟು ಪಾಸಿಟಿವಿಟಿ ದರ ಅಥವಾ ಅದಕ್ಕಿಂತಲೂ ಹೆಚ್ಚಿನ ಪಾಸಿಟಿವಿಟಿ ದರ ಅಥವಾ ಆಕ್ಸಿಜನ್ ಬೆಂಬಲಿತ, ಐಸಿಯು ಬೆಡ್ ಗಳು ಶೇ.40 ರಷ್ಟು ಭರ್ತಿಯಾಗಿರುವುದು ಅಥವಾ ಅದಕ್ಕಿಂತ ಹೆಚ್ಚಾಗಿರುವ ಪ್ರದೇಶಗಳಲ್ಲಿ ರಾಜ್ಯಗಳು ಜಿಲ್ಲಾ ಮಟ್ಟದಲ್ಲಿ ನಿರ್ಧಾರಗಳನ್ನು ಕೈಗೊಳ್ಳುವ ಸೌಲಭ್ಯ ಕಲ್ಪಿಸಬೇಕೆಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.