ಶಿವಮೊಗ್ಗ, ಡಿ 22 (DaijiworldNews/MS): ಮಹಿಳೆಯೊಬ್ಬಳು ತನ್ನ ಪುತ್ರನನ್ನು ಅಪಹರಿಸಿರುವುದಾಗಿ ಯುವಕನೋರ್ವನ ತಾಯಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ಶಿವಮೊಗ್ಗದ ಮಲ್ಲಿಗೆನಹಳ್ಳಿಯಲ್ಲಿ ವಾಸವಾಗಿರುವ ತನ್ನ 19 ವರ್ಷದ ಮಗನನ್ನು ಮದುವೆಯಾಗುವ ಉದ್ದೇಶದಿಂದ ಮಹಿಳೆಯೊಬ್ಬರು ತನ್ನ ಮಗನನ್ನು ತಮಿಳುನಾಡಿಗೆ ಕರೆದುಕೊಂಡು ಹೋಗಿರುವುದಾಗಿ ತಾಯಿಯೊಬ್ಬರು ಶಿವಮೊಗ್ಗದ ತುಂಗಾನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.
ಮಹಿಳೆಗೆ ಕೆಲ ವರ್ಷಗಳ ಹಿಂದೆ ಪತಿ ಮೃತಪಟ್ಟಿದ್ದು, ಯುವಕನೊಂದಿಗೆ ಗೆಳೆತನ ಬೆಳೆಸಿದ್ದಳು. ಮದುವೆಯಾಗಲು ತಮಿಳುನಾಡಿನಲ್ಲಿರುವ ತನ್ನ ತವರುಮನೆಗೆ ಯುವಕನನ್ನು ಕರೆದುಕೊಂಡು ಹೋಗಿದ್ದಾಳೆ ಎಂದು ಹೇಳಲಾಗಿದೆ.
ಡಿಸೆಂಬರ್ 10 ರಂದು ಬೆಳಗ್ಗೆ ಮನೆಯಿಂದ ಹೊರ ಹೋಗಿದ್ದ ಮಗ ವಾಪಸ್ ಬಂದಿಲ್ಲ. ಆತನ ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ಯುವಕನ ತಾಯಿ ತುಂಗಾನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.