ಲಕ್ನೋ, ಡಿ 21(DaijiworldNews/MS): ಉತ್ತರಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾಗುವ ಮುನ್ನವೇ ಫೋನ್ ಕದ್ದಾಲಿಕೆ ಆರೋಪ-ಪ್ರತ್ಯಾರೋಪಗಳು ಸಾಕಷ್ಟು ಚರ್ಚೆಗೆ ಕಾರಣವಾಗಿವೆ. ಈ ನಡುವೆ ನನ್ನ ಮಕ್ಕಳ ಇನ್ಸ್ಟಾಗ್ರಾಮ್ ಖಾತೆಗಳನ್ನು ಹ್ಯಾಕ್ ಮಾಡಲಾಗಿದೆ ಎಂದು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಈ ಹಿಂದೆ ಉತ್ತರ ಪ್ರದೇಶ ಸರ್ಕಾರ ತಮ್ಮ ಫೋನ್ ಅನ್ನು ಟ್ಯಾಪ್ ಮಾಡುತ್ತಿದ್ದು, ಪ್ರತಿ ದಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರೆಕಾರ್ಡಿಂಗ್ ಗಳನ್ನು ಕೇಳುತ್ತಾರೆ ಎಂದು ಆರೋಪಿಸಿದ್ದರು.
ಹೀಗಾಗಿ ಯೋಗಿ ವಿರುದ್ದ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರು ದೂರವಾಣಿ ಕದ್ದಾಲಿಕೆ ಆರೋಪ ನಡೆಸಿದ ಸಮಯದಲ್ಲೇ ಪ್ರಿಯಾಂಕಾ ಗಾಂಧಿ ಈ ಹೇಳಿಕೆ ಮಹತ್ವ ಪಡೆದಿದೆ.
ನನ್ನ ಮಕ್ಕಳ ಇನ್ಸ್ಟಾಗ್ರಾಮ್ ಖಾತೆಯನ್ನೂ ಕೂಡ ಉತ್ತರ ಪ್ರದೇಶ ಸರ್ಕಾರ ಹ್ಯಾಕ್ ಮಾಡಿದೆ. ಸರ್ಕಾರಕ್ಕೆ ಬೇರೆ ಯಾವುದೇ ಕೆಲಸ ಇಲ್ಲವೆಂದು ಇದನ್ನು ನೋಡಿದರೆ ಸಾಬೀತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ಉತ್ತರ ಪ್ರದೇಶದಲ್ಲಿ ಫೋನ್ ಟ್ಯಾಪಿಂಗ್ ಹಾಗೂ ಹ್ಯಾಕ್ ಎನ್ನುವ ಪದಗಳೇ ಸಾಕಷ್ಟಾಗಿ ಚರ್ಚೆಯಾಗುತ್ತಿವೆ.