ನವದೆಹಲಿ, ಡಿ 21 (DaijiworldNews/MS): ಪಾಕಿಸ್ತಾನದಿಂದ ಭಾರತದ ವಿರುದ್ಧ ಪ್ರಚಾರದಲ್ಲಿ ತೊಡಗಿದ್ದ 20 ಯೂಟ್ಯೂಬ್ ಚಾನೆಲ್ ಗಳು ಮತ್ತು ಎರಡು ವೆಬ್ ಸೈಟ್ ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಮಾಹಿತಿ ಮತ್ತು ಪ್ರಸಾರ ಖಾತೆ ಕಾರ್ಯದರ್ಶಿ ಅಪೂರ್ವ ಚಂದ್ರ ಅವರು ಯೂಟ್ಯೂಬ್ ಮತ್ತು ಟೆಲಿಕಾಂ ಇಲಾಖೆಗೆ ಪತ್ರ ಬರೆದು, ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆಯ ಮೇಲೆ ಪರಿಣಾಮ ಬೀರುವ ವಿಷಯವನ್ನು ತಕ್ಷಣವೇ ನಿರ್ಬಂಧಿಸುವಂತೆ ನಿರ್ದೇಶಿಸಿದ್ದಾರೆ.
ನಿಷೇಧಗೊಂಡ ಚಾನೆಲ್ ಗಳ ಪೈಕಿ 15 ಚಾನೆಲ್ ಗಳು ನಯಾ ಪಾಕಿಸ್ತಾನ್ ಎಂಬ ಗುಂಪೊಂದು ನಡೆಸುತ್ತಿದೆ ಉಳಿದವು ನೇಕೆಡ್ ಟ್ರುತ್, 48 ನ್ಯೂಸ್ ಮತ್ತು ಜುನೈದ್ ಹಲಿಮ್ ಅಫೀಶಿಯಲ್ ಮೊದಲಾದ ಚಾನೆಲ್ ಗಳಾಗಿವೆ. ಅಧಿಕಾರಿಗಳ ಪ್ರಕಾರ ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ ಸಹಾಯದಿಂದ ಪ್ರಚಾರ ನಡೆಸಲಾಗುತ್ತಿದೆ. ಯೂಟ್ಯೂಬ್ನಲ್ಲಿ ಎರಡು ಮಿಲಿಯನ್ಗಿಂತಲೂ ಹೆಚ್ಚು ಚಂದಾದಾರರನ್ನು ಹೊಂದಿರುವ 'ನಯಾ ಪಾಕಿಸ್ತಾನ' ಗುಂಪಿನ ಯೂಟ್ಯೂಬ್ ಕಾಶ್ಮೀರ, ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆಗಳು ಮತ್ತು ಅಯೋಧ್ಯೆಯಂತಹ ವಿಷಯಗಳ ಕುರಿತು "ಸುಳ್ಳು ಸುದ್ದಿ" ರಚಿಸಿ ಅದನ್ನು ಹರಡುತ್ತಿದೆ.
ಭಾರತ ವಿರೋಧಿ ಪ್ರಚಾರ ವೆಬ್ಸೈಟ್ಗಳನ್ನು ನಿಷೇಧಿಸಲು ಐಟಿ ನಿಯಮಗಳು, 2021 ರ ಅಡಿಯಲ್ಲಿ ತುರ್ತು ಅಧಿಕಾರವನ್ನು ಬಳಸಿರುವುದು ಇದೇ ಮೊದಲ ಬಾರಿ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.