ಬೆಂಗಳೂರು, ಡಿ 22 (DaijiworldNews/MS): ರಾಜ್ಯ ಬಿಜೆಪಿ ಸರ್ಕಾರ ಎಲ್ಲದಕ್ಕೂ ಕೊರೊನಾ ನೆಪ ಹೇಳಿದ್ದು ಸಾಕು, ಮೇಕೆದಾಟು ಯೋಜನೆ ತಕ್ಷಣ ಕೈಗೆತ್ತಿಕೊಳ್ಳಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಮೇಕೆದಾಟು ವಿಚಾರವಾಗಿ ತಮ್ಮ ಅಧಿಕೃತ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಅವರು, ಕಾನೂನಾತ್ಮಕ ಅಡೆತಡೆಗಳಿಲ್ಲದಿದ್ದರೂ ರಾಜ್ಯ ಬಿಜೆಪಿ ಸರ್ಕಾರದ ವಿಳಂಬ ಧೋರಣೆಯಿಂದಾಗಿ ನೆನೆಗುದಿಗೆ ಬಿದ್ದಿರುವ ಮೇಕೆದಾಟು ಯೋಜನೆಯನ್ನು ಕೂಡಲೇ ಕೈಗೆತ್ತಿಕೊಳ್ಳುವಂತೆ ಆಗ್ರಹಿಸಿ ಕಾಂಗ್ರೆಸ್ ಪಕ್ಷ ಜನವರಿ 9 ರಿಂದ 19 ರ ವರೆಗೆ ಪಾದಯಾತ್ರೆ ಹಮ್ಮಿಕೊಂಡಿದೆ ಎಂದು ಹೇಳಿದ್ದಾರೆ.
1968 ರಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗಲೇ ಮೇಕೆದಾಟು ಯೋಜನೆ ಜಾರಿಗೆ ಚಿಂತನೆ ಮಾಡಿತ್ತು, ಆದರೆ ಜಲ ವ್ಯಾಜ್ಯ ನ್ಯಾಯಾಲಯದಲ್ಲಿ ಇದ್ದುದ್ದರಿಂದ ಯೋಜನೆ ಜಾರಿ ಸಾಧ್ಯವಾಗಿರಲಿಲ್ಲ. 2013 ನಾವು ಅಧಿಕಾರಕ್ಕೆ ಬಂದಮೇಲೆ ಮೇಕೆದಾಟು ಯೋಜನೆಯ ಯೋಜನಾ ವರದಿ ಸಿದ್ಧಪಡಿಸಿದ್ದೆವು. ಪ್ರವಾಹ, ಅತಿವೃಷ್ಟಿ ಮುಂತಾದ ಕಾರಣಗಳಿಂದ ಹರಿವು ಹೆಚ್ಚಾದ ಸಂದರ್ಭದಲ್ಲಿ ಸಮುದ್ರದ ಪಾಲಾಗಿ ವ್ಯರ್ಥವಾಗುವ ನೀರನ್ನು ಸಂಗ್ರಹಿಸಿ, ಬೇಸಿಗೆ ಸಮಯದಲ್ಲಿ ಕೃಷಿ, ವಿದ್ಯುತ್ ಉತ್ಪಾದನೆ ಮುಂತಾದ ಉದ್ದೇಶಗಳಿಗಾಗಿ ಬಳಕೆ ಮಾಡಿಕೊಳ್ಳುವುದು ಮೇಕೆದಾಟು ಯೋಜನೆಯ ಉದ್ದೇಶ. ಬೆಂಗಳೂರು ನಗರದ 30% ಜನರಿಗೆ ಕಾವೇರಿ ನೀರಿನ ಪೂರೈಕೆ ಆಗುತ್ತಿಲ್ಲ. ಮೇಕೆದಾಟು ಯೋಜನೆಯಿಂದ ಬೆಂಗಳೂರು ಸೇರಿದಂತೆ ಸುಮಾರು ಹತ್ತು ಜಿಲ್ಲೆಗಳ 2.5 ಕೋಟಿ ಜನರಿಗೆ ಅನುಕೂಲ ಆಗಲಿದೆ. ಹೀಗಾಗಿ ಕೂಡಲೇ ರಾಜ್ಯ ಸರ್ಕಾರ ಯೋಜನೆಯನ್ನು ಕೈಗೆತ್ತಿಕೊಳ್ಳಬೇಕು ಎಂಬುದು ನಮ್ಮ ಆಗ್ರಹ ಎಂದು ಒತ್ತಾಯಿಸಿದ್ದಾರೆ.
ಈ ಪಾದಯಾತ್ರೆ ನಮ್ಮ ಪಕ್ಷದ ಕಾರ್ಯಕ್ರಮವಲ್ಲ. ರಾಜ್ಯದ ಜನರ ಹಿತದೃಷ್ಟಿಯಿಂದ ಆಯೋಜಿಸಿರುವ ಹೋರಾಟ. ಎಲ್ಲಾ ಸಂಘ ಸಂಸ್ಥೆಗಳು, ಆಸಕ್ತರು ಇದರಲ್ಲಿ ಭಾಗವಹಿಸುವಂತೆ ವಿನಮ್ರವಾಗಿ ಮನವಿ ಮಾಡುತ್ತೇನೆ. ಮೇಕೆದಾಟು ನಮ್ಮ ಹಕ್ಕು, ನಮ್ಮ ಹಕ್ಕಿಗಾಗಿ ಹೋರಾಡೋಣ ಎಂದು ರಾಜ್ಯದ ಜನತೆಗೆ ಕರೆ ನೀಡಿದ್ದಾರೆ.
ಹಸಿರು ನ್ಯಾಯಾಧೀಕರಣ, ಸುಪ್ರೀಂ ಕೋರ್ಟ್ಗಳು ಯೋಜನೆ ಜಾರಿಗೆ ಆಕ್ಷೇಪ ಮಾಡುತ್ತಿಲ್ಲ. ಯೋಜನಾ ವರದಿ ಸಿದ್ಧವಾಗಿದೆ, ತಮಿಳುನಾಡಿಗೆ ಕಾನೂನಾತ್ಮಕವಾಗಿ ವಿರೋಧಿಸುವ ಹಕ್ಕು ಇಲ್ಲ, ಇಷ್ಟೆಲ್ಲಾ ಅನುಕೂಲಗಳಿದ್ದಾಗ್ಯೂ ಯೋಜನೆಯ ಅನುಷ್ಠಾನ ಆರಂಭವಾಗಿಲ್ಲ.ರಾಜ್ಯ ಸರ್ಕಾರ ಎಲ್ಲದಕ್ಕೂ ಕೊರೊನಾ ನೆಪ ಹೇಳಿದ್ದು ಸಾಕು.ರಾಜ್ಯದಲ್ಲಿ ಮತ್ತು ಕೇಂದ್ರ ಅಧಿಕಾರಕ್ಕೆ ಬರಬೇಕು. ಡಬಲ್ ಇಂಜಿನ್ ಸರ್ಕಾರ ಇದ್ದರೆ ಕೇಂದ್ರದಿಂದ ಹಣದ ಹೊಳೆ ಹರಿಯುತ್ತದೆ ಎಂದಿದ್ದರು, ಈಗ ಹೋಗಿ ಹಣ ತಂದು ಅಭಿವೃದ್ಧಿ ಕೆಲಸ ಮಾಡಲಿ ಎಂದು ಆಗ್ರಹಿಸಿದ್ದಾರೆ.