ಬೆಳಗಾವಿ, ಡಿ.21 (DaijiworldNews/HR): "ಮತಾಂತರ ನಿಷೇಧ ಕಾಯ್ದೆ ಜಾರಿಯ ಹಿಂದೆ ದೊಡ್ಡ ಷಡ್ಯಂತ್ರವಿದ್ದು, ಇದಕ್ಕೆ ನಾವು ಆಸ್ಪದ ಕೊಡಲ್ಲ. ಬಿಜೆಪಿಯವರ ಮಕ್ಕಳೇ ಲವ್ ಜಿಹಾದ್ನಲ್ಲಿದ್ದಾರೆ. ಮೊದಲು ಅದಕ್ಕೆ ಉತ್ತರ ಕೊಡಲಿ" ಎಂದು ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಬಿ.ಕೆ. ಹರಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಮತಾಂತರ ನಿಷೇಧ ಕಾನೂನಿಗೆ ನಮ್ಮ ವಿರೋಧ ಇದೆ. ಪರಿಷತನಲ್ಲಿ ಮಸೂದೆ ಮಂಡಿಸಿದರೆ ವಿರೋಧಿಸುತ್ತೇವೆ. ಬಿಜೆಪಿಯವರು ದಾರಿ ತಪ್ಪಿದ ಮಕ್ಕಳು. ಅವರಿಗೆ ಏನನ್ನೂ ಹೇಳಲಾಗದು. ಸಿಎಂ ಬೊಮ್ಮಾಯಿ ಹೇಗಿದ್ದರೂ ಹೋಗುತ್ತಿದ್ದಾರೆ. ಅವರು ಹೋಗುವ ಮುನ್ನ ಒಳ್ಳೆಯ ಕೆಲಸ ಮಾಡಿ ಹೋಗಲಿ" ಎಂದಿದ್ದಾರೆ.
ಇನ್ನು "ಮಹಾರಾಷ್ಟ್ರದ ಮಾಜಿ ಗೃಹ ಸಚಿವರು ಬೆಳಗಾವಿಯಲ್ಲೇ ಎರಡು ದಿನ ಉಳಿದಿದ್ದರು. ಆದರೆ ಈ ಬಗ್ಗೆ ಇಲ್ಲಿನ ಗೃಹ ಸಚಿವರಿಗೆ ಮಾಹಿತಿಯೇ ಇಲ್ಲ. ಇದರ ಹಿಂದೆ ರಾಜಕಾರಣಿಗಳ ಷಡ್ಯಂತ್ರವಿದೆ. ಈ ಘಟನೆಯ ಸಮಗ್ರ ತನಿಖೆ ಆಗಬೇಕು" ಎಂದು ಒತ್ತಾಯಿಸಿದ್ದಾರೆ.
"ಮತಾಂತರ ತಡೆ ಮಸೂದೆ ತರುವ ಮುನ್ನ ವಿದೇಶಿ ಕನ್ನಡಿಗರ ಬಗ್ಗೆಯೂ ಸರ್ಕಾರ ಯೋಚಿಸಲಿ. ಇಲ್ಲಿ ಆ ಕಾಯ್ದೆ ತಂದರೆ ವಿದೇಶಗಳಲ್ಲಿ ಕನ್ನಡಿಗರು ನೆಮ್ಮದಿಯಾಗಿ ಇರಲು ಸಾಧ್ಯವೇ? ಕ್ರಿಶ್ಚಿಯನ್ ಸಮುದಾಯವನ್ನು ಗುರಿಯಾಗಿಸಿ ಈ ಕಾನೂನು ತರುತ್ತಿದ್ದಾರೆ" ಎಂದು ಆರೋಪಿಸಿದ್ದಾರೆ.