ಕೊಚ್ಚಿ, ಡಿ.21 (DaijiworldNews/HR): ಕೊರೊನಾ ಲಸಿಕೆ ಪ್ರಮಾಣಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ಇರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ಮಂಗಳವಾರ ವಜಾಗೊಳಿಸಿದ್ದು, ಈ ರೀತಿಯಾಗಿ ತಕರಾರು ತೆಗೆದ ಅರ್ಜಿದಾರನಿಗೆ ಒಂದು ಲಕ್ಷ ರೂಪಾಯಿ ದಂಡ ವಿಧಿಸಿದೆ.
ಇದು ದುರುದ್ದೇಶದಿಂದ ಸಲ್ಲಿಕೆಯಾದ ಕ್ಷುಲ್ಲಕ ಅರ್ಜಿಯಾಗಿದ್ದು, ಅರ್ಜಿದಾರರಿಗೆ ರಾಜಕೀಯ ಅಜೆಂಡಾ ಕೂಡ ಇದೆ ಎಂಬ ಬಲವಾದ ಅನುಮಾನವಿದೆ. ಇದು ಪ್ರಚಾರ ಪಡೆಯುವ ಸಲುವಾಗಿ ಸಲ್ಲಿಸಲಾಗಿದ್ದ ಅರ್ಜಿ. ಆದ್ದರಿಂದ ಈ ಅರ್ಜಿಯು ಭಾರಿ ಮೊತ್ತದ ದಂಡದೊಂದಿಗೆ, ವಜಾಗೊಳಿಸಲಾಗುವುದು ಎಂದು ನ್ಯಾಯಮೂರ್ತಿ ಪಿ.ವಿ. ಕುಂಞಿಕೃಷ್ಣನ್ ಅಭಿಪ್ರಾಯಪಟ್ಟರು.
"ನರೇಂದ್ರ ಮೋದಿಯವರು ಭಾರತ ಪ್ರಧಾನಿಯೇ ಹೊರತು ಅಮೇರಿಕಾದ ಪ್ರಧಾನಿಯಲ್ಲ. ಮೋದಿಯವರು ಅಧಿಕಾರಕ್ಕೆ ಬಂದದ್ದು ಜನಾದೇಶದಿಂದ. ನೀವು ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಹೆಸರಿನ ಸಂಸ್ಥೆಯೊಂದಿಗೆ ಕೆಲಸ ಮಾಡುತ್ತಿದ್ದೀರಿ, ಆ ಸಂಸ್ಥೆಯಿಂದ ನೆಹರು ಹೆಸರನ್ನು ತೆಗೆದುಹಾಕುವ ನಿಲುವನ್ನು ನೀವು ಏಕೆ ತೆಗೆದುಕೊಳ್ಳುತ್ತಿಲ್ಲ?" ಎಂದು ಪ್ರಶ್ನಿಸಿದ್ದಾರೆ.
ಇನ್ನು ಮೋದಿ ನಮ್ಮ ಪ್ರಧಾನಿ, ನಿಮಗೆ ರಾಜಕೀಯ ಭಿನ್ನಾಭಿಪ್ರಾಯಗಳಿರಬಹುದು. ಆದರೆ ಸರ್ಟಿಫಿಕೇಟ್ನಲ್ಲಿ ಪ್ರಧಾನಿಯವರ ಫೋಟೋದಿಂದ ನಿಮೆಗ ಏನು ಸಮಸ್ಯೆ ಅಂತ ನನಗೆ ಅರ್ಥವಾಗುತ್ತಿಲ್ಲ ಎಂದು ಕೋರ್ಟ್ ಹೇಳಿದೆ.