ಲಕ್ನೋ, ಡಿ 21 (DaijiworldNews/MS): ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯ ಪ್ರಚಾರದ ನಡುವೆ, ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕ ಎಂದೇ ಹೇಳಲಾಗುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರೊಂದಿಗೆ ಸಮಾಜವಾದಿ ಪಕ್ಷದ ಹಿರಿಯ ಮುಖಂಡ ಮುಲಾಯಂ ಸಿಂಗ್ ಯಾದವ್ ಇರುವ ಫೋಟೋ ರಾಜಕೀಯವಲಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.
ಸೋಮವಾರ ದೆಹಲಿಯಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಮೊಮ್ಮಗಳ ವಿವಾಹ ಆರತಕ್ಷತೆಯಲ್ಲಿ ಮುಲಾಯಂ ಸಿಂಗ್ ಯಾದವ್ ಮತ್ತು ಮೋಹನ್ ಭಾಗವತ್ ಭೇಟಿಯಾಗಿರುವ ಪೋಟೋ ಇದಾಗಿದೆ.
ಮುಲಾಯಂ ಸಿಂಗ್ ಅವರ ಪುತ್ರ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರ ಆಪ್ತರ ಮೇಲೆ ನಡೆದ ಐಟಿ ದಾಳಿಯ ಬಳಿಕ ಎರಡು ದಿನಗಳ ನಂತರ ಈ ಭೇಟಿ ಮಹತ್ವವನ್ನು ಪಡೆದಿದೆ.
ಮೋಹನ್ ಭಾಗವತ್ ಅವರ ಜನ್ಮದಿನದಂದು ಆಶೀರ್ವಾದ ಪಡೆದ ಕೇಂದ್ರ ಸಚಿವ ಅರ್ಜುನ್ ಮೇಘವಾಲ್ ಟ್ವೀಟ್ ಮಾಡಿದ ಫೋಟೋದಲ್ಲಿ ಮುಲಾಯಂ ಸಿಂಗ್ ಮತ್ತು ಆರ್ಎಸ್ಎಸ್ ಮುಖ್ಯಸ್ಥರು ಒಟ್ಟಿಗೆ ಕುಳಿತಿರುವುದು ಕಂಡುಬಂದಿದೆ.
ಈ ಪೋಟೋ ಟ್ವೀಟ್ ಆದಕೆಲವೇ ಗಂಟೆಗಳ ನಂತರ, ಸಮಾಜವಾದಿ ಪಕ್ಷವನ್ನು ಗುರಿಯಾಗಿಟ್ಟುಕೊಂಡು ಕಾಂಗ್ರೆಸ್ ಟ್ವೀಟ್ ಮಾಡಿದೆ.
'ಹೊಸ ಎಸ್ಪಿ'ಯಲ್ಲಿ ಎಸ್ ಎಂದರೆ ಸಂಘವಾದ್ ಎಂದು ಅರ್ಥ' ಎಂದು ಉತ್ತರ ಪ್ರದೇಶ ಕಾಂಗ್ರೆಸ್ ಹಿಂದಿಯಲ್ಲಿ ತನ್ನ ಪೋಸ್ಟ್ ನಲ್ಲಿ ವ್ಯಂಗ್ಯವಾಡಿದೆ. ಇದಕ್ಕೆ ಪ್ರತಿಯಾಗಿ ಉತ್ತರ ಪ್ರದೇಶದ ಬಿಜೆಪಿಯೂ ಟ್ವೀಟ್ ಮಾಡಿದ್ದು "ಒಂದು ಚಿತ್ರವು ಬಹಳಷ್ಟು ಹೇಳುತ್ತದೆ" ಎಂದು ಹೇಳಿದೆ.
ಆರತಕ್ಷತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿ ಎನ್ವಿ ರಮಣ ಸೇರಿದಂತೆ ಅನೇಕ ದೊಡ್ಡ ಅತಿಥಿಗಳು ಕಾಣಿಸಿಕೊಂಡಿದ್ದರೂ, ಮುಂದಿನ ವರ್ಷದ ಆರಂಭದಲ್ಲಿ ಯುಪಿ ಚುನಾವಣೆಯ ಹೈ-ವೋಲ್ಟೇಜ್ ಪ್ರಚಾರದ ಮಧ್ಯೆ ಈ ಒಂದು ಪೋಟೋ ರಾಜಕೀಯ ವಲಯದಲ್ಲಿ ಹೆಚ್ಚು ಚರ್ಚೆಗೆ ಕಾರಣವಾಯಿತು.