ನೆಲ್ಲೂರು, ಡಿ 22 (DaijiworldNews/MS): ಯೂಟ್ಯೂಬ್ ವಿಡಿಯೋ ಸಹಾಯದಿಂದ ವ್ಯಕ್ತಿಯೊಬ್ಬ ತನ್ನ ಪತ್ನಿಯ ಹೆರಿಗೆ ಮಾಡಲು ಯತ್ನಿಸಿದ ಪರಿಣಾಮ, ಶಿಶು ಸಾವನ್ನಪ್ಪಿದೆ. ಅಲ್ಲದೇ 28 ವರ್ಷದ ಮಹಿಳೆಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಈತನ ವಿರುದ್ದ ಆರೋಗ್ಯ ಇಲಾಖೆ ದೂರು ದಾಖಲಿಸಿದೆ.
ಜಿಲ್ಲೆಯ ನೆಮಿಲಿ ಬಳಿಯ ಪಣಪಕ್ಕಂನಲ್ಲಿ ಸಣ್ಣ ಅಂಗಡಿಯೊಂದನ್ನು ನಡೆಸುತ್ತಿರುವ ಲೋಕನಾಥನ್ (32) ತಮ್ಮ ಹೆಂಡತಿ ಗೋಮತಿ (28)ಗೆ ಹೆರಿಗೆ ಮಾಡಿಸಲು ಯೂಟ್ಯೂಬ್ ವೀಡಿಯೊ ಮೊರೆ ಹೋದ ವ್ಯಕ್ತಿಯಾಗಿದ್ದಾನೆ. ಆದರೆ ಪತ್ನಿಯ ಹೆರಿಗೆ ಸಮಯದಲ್ಲಿ ಅಪಾರ ರಕ್ತಸ್ರಾವವಾಗಿದೆ. ಹಾಗಾಗಿ ಮಗು ಹುಟ್ಟುವ ಸಮಯದಲ್ಲಿ ಆಕೆ ಪ್ರಜ್ಞಾಹೀನಳಾಗಿದ್ದಾಳೆ. ಬಳಿಕ ಗಂಭೀರ ಸ್ಥಿತಿಯಲ್ಲಿದ್ದ ಗೋಮತಿ ಅವರನ್ನು ಪುನ್ನೈ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು ಆದರೆ ಅಲ್ಲಿಂದ ಬಳಿಕ ವೆಲ್ಲೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಒಂದು ವರ್ಷದ ಹಿಂದೆ ಲೋಗನಾಥನ್ ಮತ್ತು ಗೋಮತಿ ವಿವಾಹವಾಗಿದ್ದರು. ಅವರು ಡಿಸೆಂಬರ್ 13 ರಂದು ಮಗುವಿನ ನಿರೀಕ್ಷೆಯಲ್ಲಿದ್ದರು. ಆದರೆ, ಡಿಸೆಂಬರ್ 18 ರ ನಂತರ ಗೋಮತಿ ಹೆರಿಗೆ ನೋವು ಕಾಣಿಸಿಕೊಂಡಿದ್ದು ವೈದ್ಯಕೀಯ ಸಹಾಯ ಪಡೆಯುವ ಬದಲು ಯೂಟ್ಯೂಬ್ನಲ್ಲಿ ವಿಡಿಯೋ ನೋಡಿಕೊಂಡು ಹೆರಿಗೆ ಮಾಡಲು ಪ್ರಯತ್ನಿಸಿದ್ದಾನೆ
ದಂಪತಿಗಳ ಕ್ರಮವು ಶಿಶುವಿನ ಸಾವಿಗೆ ಕಾರಣವಾಗಿರುವುದರಿಂದ ಪ್ರಾಥಮಿಕ ಆರೋಗ್ಯ ಅಧಿಕಾರಿ ಮೋಹನ್ ದೂರು ದಾಖಲಿಸಿದ್ದಾರೆ.ಶಿಶು ಸಾವು ಸೇರಿದಂತೆ ಸಂಪೂರ್ಣ ಘಟನೆ ಬಗ್ಗೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
ಮಹಿಳೆ ಗರ್ಭಿಣಿಯಾದ ನಂತರ ನಿಯಮಿತ ತಪಾಸಣೆಗೆ ಹೋಗಲು ದಂಪತಿ ನಿರಾಕರಿಸಿದ್ದರು ಎಂದು ತಿಳಿದುಬಂದಿದೆ.