ಬೆಳಗಾವಿ, ಡಿ.20 (DaijiworldNews/HR): ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ವಿರೂಪಗೊಳಿಸಿದವರು ಹಾಗೂ ಬೆಂಗಳೂರಿನಲ್ಲಿ ಶಿವಾಜಿ ಮೂರ್ತಿಗೆ ಮಸಿ ಬಳಿದಂತ ಬಂಧಿತರ ವಿರುದ್ಧ ಗುಂಡಾ ಕಾಯ್ದೆ ಹಾಗೂ ದೇಶದ್ರೋಹ ಕಾಯ್ದೆಗಳಡಿಯಲ್ಲಿ ಕೇಸ್ ದಾಖಲಿಸಿ, ತನಿಖೆಯ ಮೂಲಕ ಅವರ ಹಿಂದೆ ಯಾರ್ ಇದ್ದಾರೆ ಎನ್ನುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಘೋಷಣೆ ಮಾಡಿದ್ದಾರೆ.
ಬೆಳಗಾವಿಯ ಸುವರ್ಣ ಸೌಧದಲ್ಲಿ ಮಾತನಾಡಿದಂತ ಅವರು, ಮಹಾರಾಷ್ಟ್ರದ ಜತ್ ತಾಲೂಕು, ಬಹಳ ಬರಗಾಲಪೀಡಿತ ತಾಲೂಕಾಗಿದೆ. ಕನ್ನಡಿಗರು ಇರುವಂತ ತಾಲೂಕಾಗಿದೆ. ಈ ತಾಲೂಕಿನ 40 ಗ್ರಾಮ ಪಂಚಾಯ್ತಿಗಳು ಕರ್ನಾಟಕಕ್ಕೆ ಸೇರಿಸುವಂತೆ ರೆಸಲ್ಯೂಷನ್ ಮಾಡಿವೆ. ಇದ್ಯಾವುದನ್ನು ಲೆಕ್ಕಿಸದೇ ಕೆಲವರು ಒಂದಿಲ್ಲ ಒಂದು ರೀತಿಯಲ್ಲಿ ಬೆಳಗಾವಿಯನ್ನು ಟಾರ್ಗೆಟ್ ಮಾಡಿಕೊಂಡು ಕ್ಷೋಭೆ ಉಂಟು ಮಾಡುವಂತ ಕೆಲಸವನ್ನು ಮಾಡುತ್ತಿದ್ದಾರೆ ಎಂದರು.
ಇನ್ನು ಈ ರೀತಿ ಕೆಲಸ ಮಾಡಿದ ಪುಂಡರಿಗೆ ಬೆಳಗಾವಿಯನ್ನು ಕ್ಷೋಭೆ ತರುತ್ತಿರೋ ಬಗ್ಗೆ ಇತಿಶ್ರೀ ಹಾಡಬೇಕು ಅಂದ್ರೇ, ಎಲ್ಲರೂ ಕೂಡಿ ಕಠಿಣ ನಿಲುವನ್ನು ತೆಗೆದುಕೊಳ್ಳಬೇಕಿದೆ" ಎಂದಿದ್ದಾರೆ.
ಇವತ್ತು ಮೂರ್ತಿಗಳನ್ನು ಭಂಗ ಮಾಡೋದು ಪ್ರವೃತ್ತಿಯಾಗಿದೆ. ನೀವು ಗುಲ್ಬರ್ಗಾ, ಬೀದರ್ ಕಡೆ ಹೋದರೆ ಒಂದು ವರ್ಗ ಅಂಬೇಡ್ಕರ್, ಮತ್ತೊಂದು ವರ್ಗ ಬಸವಣ್ಣನ ಮೂರ್ತಿ ಬಂಗ ಮಾಡಲಾಗುತ್ತದೆ. ಅದೇ ರೀತಿಯಲ್ಲೇ ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ಭಂಗ ಮಾಡಲಾಗಿದೆ. ಇದರ ಹಿಂದೆ ಕ್ರಿಮಿನಲ್ ಮೈಂಡ್ ಇದೆ. ರಾಜ್ಯದಲ್ಲಿ ಅಶಾಂತಿ ಮೂಡಿಸಬೇಕು ಎನ್ನುವ ಉದ್ದೇಶದಿಂದಲೇ ಮಾಡಿರೋದಾಗಿದೆ ಎಂದರು.
ಇನ್ನು ನಾವು ಈ ಬಾರಿ ಕೇವಲ ಬಂಧಿಸಿ, ಬೇಲ್ ನಲ್ಲಿ ಹೊರಗೆ ಬರೋದಕ್ಕೆ ಬಿಡದೇ, ಈ ಪ್ರಕರಣದ ಸಂಪೂರ್ಣ ತನಿಖೆಯನ್ನು ಮಾಡಲಾಗುತ್ತದೆ. ಯಾರ ಷಡ್ಯಂತರದಿಂದ ಮಾಡಲಾಗಿದೆ ಎನ್ನುವ ತನಿಖೆಯನ್ನು ಮಾಡಲಾಗುತ್ತದೆ. ಈ ಕೃತ್ಯವನ್ನು ಎಸಗಿದವರ ಮೇಲೆ ಗುಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುತ್ತದೆ. ದೇಶದ್ರೋಹದ ಕೇಸ್ ಹಾಕಿ ಅವರ ಹಿನ್ನಲೆಯನ್ನು ತನಿಖೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.