ನವದೆಹಲಿ, ಡಿ.20 (DaijiworldNews/HR): ಕೆಮ್ಮಿನ ಸಿರಪ್ ಸೇವಿಸಿ ಮೂವರು ಮಕ್ಕಳು ಸಾವನ್ನಪ್ಪಿರುವ ಘಟನೆ ದೆಹಲಿಯಲ್ಲಿ ನಡೆದಿದೆ ಎಂದು ಆರೋಗ್ಯ ಸೇವೆಗಳ ನಿರ್ದೇಶನಾಲಯ (ಡಿಜಿಎಚ್ಎಸ್) ತನ್ನ ತನಿಖಾ ವರದಿಯಲ್ಲಿ ಉಲ್ಲೇಖಿಸಿದೆ.
ಕಲಾವತಿ ಸರಣ್ ಮಕ್ಕಳ ಆಸ್ಪತ್ರೆಯಲ್ಲಿ ಸಿರಪ್ ಸೇವಿಸಿದ 16 ಡೆಕ್ಸ್ಟ್ರೋಮೆಥೋರ್ಫಾನ್ ವಿಷದ ಪ್ರಕರಣಗಳು ವರದಿಯಾಗಿದ್ದು, ಅದರಲ್ಲಿ ಮೂರು ಮಕ್ಕಳು ಆಸ್ಪತ್ರೆಯಲ್ಲಿಯೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಔಷಧವನ್ನು ಒಮೆಗಾ ಫಾರ್ಮಾಸ್ಯುಟಿಕಲ್ಸ್ ತಯಾರಿಸಿದೆ ಎಂದು ವಿಚಾರಣೆಯ ವರದಿ ಹೇಳಿದ್ದು, ಪತ್ರದಲ್ಲಿ, ಡಿಜಿಎಚ್ಎಸ್ ಎಲ್ಲಾ ಡಿಸ್ಪೆನ್ಸರಿಗಳು ಮತ್ತು ಮೊಹಲ್ಲಾ ಚಿಕಿತ್ಸಾಲಯಗಳಿಗೆ ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಡೆಕ್ಸ್ಟ್ರೋಮೆಥೋರ್ಫಾನ್ ಅನ್ನು ಶಿಫಾರಸು ಮಾಡದಂತೆ ಸೂಚನೆ ನೀಡುವಂತೆ ದೆಹಲಿ ಸರ್ಕಾರವನ್ನು ಕೇಳಿಕೊಂಡಿದೆ.
ಎಐಐಎಂಎಸ್ ಪಾಟ್ನಾದ ಮಕ್ಕಳ ವಿಭಾಗದ ಹೆಚ್ಚುವರಿ ಪ್ರಾಧ್ಯಾಪಕ ಡಾ.ಚಂದ್ರ ಮೋಹನ್ ಕುಮಾರ್ ಈ ಕುರಿತು ಮಾತನಾಡಿ, ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಔಷಧವನ್ನು ಬಳಸಲು ಶಿಫಾರಸು ಮಾಡದಿದ್ದರೂ, ಇದನ್ನು ಇನ್ನೂ ಬಳಸಲಾಗುತ್ತಿದೆ ಇದರಿಂದ ದೃಷ್ಟಿ ಮಸುಕಾಗುವಿಕೆ, ಅರೆನಿದ್ರಾವಸ್ಥೆ, ಚಡಪಡಿಕೆ ಮತ್ತು ಕಿರಿಕಿರಿಯಂತಹ ಅಡ್ಡಪರಿಣಾಮಗಳು ಬೀರುತ್ತದೆ ಎಂದಿದ್ದಾರೆ.