ಮುಂಬೈ, ಡಿ.20 (DaijiworldNews/HR): ನನ್ನ ಜೀವನದಲ್ಲಿ ಎಂದೂ ಲೈಂಗಿಕ ಚಿತ್ರಗಳ ನಿರ್ಮಾಣ ಮತ್ತು ಹಂಚಿಕೆಯಲ್ಲಿ ತೊಡಗಿಲ್ಲ ಎಂದು ಅಶ್ಲೀಲ ಚಿತ್ರ ನಿರ್ಮಾಣ ಮತ್ತು ಹಂಚಿಕೆ ಆರೋಪದಲ್ಲಿ ಬಂಧಿತರಾಗಿದ್ದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ಉದ್ಯಮಿ ರಾಜ್ ಕುಂದ್ರಾ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಕುಂದ್ರಾ, "ನನ್ನನ್ನು ಸುಮ್ಮನೆ ಟಾರ್ಗೆಟ್ ಮಾಡಲಾಗಿದೆ. ಈಗಾಗಲೇ ಮಾಧ್ಯಮಗಳ ವಿಚಾರಣೆಯಲ್ಲಿ ನನ್ನನ್ನು ತಪ್ಪಿತಸ್ಥ ಎಂದು ಘೋಷಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ನನ್ನ ವಿರುದ್ಧ ಅನೇಕ ದಾರಿ ತಪ್ಪಿಸುವ ಮತ್ತು ಬೇಜವಾಬ್ದಾರಿಯಿಂದ ಕೂಡಿದ ಹೇಳಿಕೆ ಮತ್ತು ಲೇಖನಗಳನ್ನು ಪ್ರಕಟಿಸಲಾಗಿದ್ದು, ನನ್ನ ಮೌನವನ್ನು ದೌರ್ಬಲ್ಯ ಎಂದು ತಪ್ಪಾಗಿ ತಿಳಿಯಲಾಗಿದೆ ಎಂದರು.
ಲೈಂಗಿಕ ವಿಷಯಕ್ಕೆ ಸಂಬಂಧಿಸಿದ ಚಿತ್ರಗಳನ್ನು ಹಂಚಿಕೆ ಮಾಡಿದ ಆರೋಪದಡಿ ದಾಖಲಾಗಿದ್ದ ಪ್ರಕರಣದಲ್ಲಿ ಅವರನ್ನು ಬಂಧಿಸದಂತೆ ಕಳೆದ ವಾರ ಸುಪ್ರೀಂ ಕೋರ್ಟ್ ರಕ್ಷಣೆ ಒದಗಿಸಿತ್ತು. ಕಳೆದ ಜುಲೈನಲ್ಲಿ ಅಶ್ಲೀಲ ಸಿನಿಮಾಗಳನ್ನು ಆ್ಯಪ್ ಮೂಲಕ ಹಂಚಿಕೆ ಮಾಡಿದ್ದ ಆರೋಪದಡಿ ಮತ್ತೊಂದು ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿ, ಸೆಪ್ಟೆಂಬರ್ನಲ್ಲಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.