ನವದೆಹಲಿ, ಡಿ.20 (DaijiworldNews/PY): ಮತದಾರರ ಪಟ್ಟಿಯನ್ನು ಆಧಾರ್ನೊಂದಿಗೆ ಲಿಂಕ್ ಮಾಡಲು ಲೋಕಸಭೆಯು ಸೋಮವಾರ ಮಸೂದೆ-ಚುನಾವಣಾ ಕಾನೂನುಗಳ ಮಸೂದೆ 2021 ಅನ್ನು ಅಂಗೀಕರಿಸಿದೆ.
ಗುರುತನ್ನು ಸ್ಥಾಪಿಸುವ ಉದ್ದೇಶಕ್ಕಾಗಿ ಮತದಾರರಾಗಿ ನೋಂದಾಯಿಸಲು ಇಚ್ಚಿಸುವ ಜನರು ಆಧಾರ್ ಸಂಖ್ಯೆಯನ್ನು ಪಡೆಯಲು ಚುನಾವಣಾ ನೋಂದಣಿ ಅಧಿಕಾರಿಗಳಿಗೆ ಅವಕಾಶ ನೀಡಲು ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ.
ಈ ವೇಳೆ ಕಾಂಗ್ರೆಸ್ ಮಸೂದೆಯನ್ನು ವಿರೋಧಿಸಿದ್ದು, ಅದನ್ನು ಸ್ಥಾಯಿ ಸಮಿತಿಗೆ ಕಳುಹಿಸುವಂತೆ ಒತ್ತಾಯಿಸಿತು.
ಈ ಸಂದರ್ಭ ಮಾತನಾಡಿ ಕಾಂಗ್ರೆಸ್ ಸಂಸದ ಶಶಿ ತರೂರ್, "ಆಧಾರ್ ಕೇವಲ ನಿವಾಸದ ಪುರಾವೆಯಾಗಿದ್ದು, ಪೌರತ್ವದ ಪುರಾವೆ ಅಲ್ಲ. ನೀವು ಮತದಾರರಿಗೆ ಆಧಾರ್ ಕೇಳುವ ಸ್ಥಿತಿಯಲ್ಲಿದ್ದರೆ, ನೀವು ಪಡೆಯುತ್ತಿರುವುದು ನಿವಾಸವನ್ನು ಪ್ರತಿಬಿಂಬಿಸುವ ದಾಖಲೆಯಾಗಿದೆಯೇ ಹೊರತು ಪೌರತ್ವವನ್ನು ಅಲ್ಲ. ನೀವು ಸಮರ್ಥವಾಗಿ ನಾಗರಿಕರಲ್ಲದವರಿಗೆ ಮತ ನೀಡುತ್ತಿದ್ದೀರಿ" ಎಂದಿದ್ದಾರೆ.
"ಈ ಮಸೂದೆಯನ್ನು ಸ್ಥಾಯಿ ಸಮಿತಿಗೆ ಕಳುಹಿಸಬೇಕು" ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಹೇಳಿದ್ಧಾರೆ.
"ಇದು ಕಾನೂನು ನ್ಯೂನತೆಗಳನ್ನು ಒಳಗೊಂಡಿದೆ. ಸುಪ್ರೀಂ ಕೋರ್ಟ್ ತೀರ್ಪಿಗೆ ಇದು ವಿರುದ್ದವಾಗಿದೆ. ಇದು ನಮ್ಮ ಖಾಸಗಿತನವನ್ನು ಉಲ್ಲಂಘಿಸುತ್ತದೆ" ಎಂದಿದ್ಧಾರೆ.