ಚಿಕ್ಕಮಗಳೂರು, ಡಿ.20 (DaijiworldNews/PY): "ಬೆಳಗಾವಿ ಎಂಇಎಸ್ ಪುಂಡಾಟಿಕೆ ಪ್ರಕರಣ ಪ್ರೊಡ್ಯೂಸರ್, ಡೈರೆಕ್ಟರ್ ಎಲ್ಲಾ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಎನ್ನುವುದು ಸ್ಪಷ್ಟವಾಗಿದೆ" ಎಂದು ಬಿಜೆಪಿ ಶಾಸಕ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ದೂರಿದ್ಧಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕೊಲ್ಲಾಪುರದಲ್ಲಿ ಕನ್ನಡ ಬಾವುಟ ಸುಡಬೇಕಾದರೆ ಎಂಇಎಸ್ ಜೊತೆ ಇದ್ದಿದ್ದು, ಕಾಂಗ್ರೆಸ್ ಕಾರ್ಯಕರ್ತರು. ಶಿವಾಜಿ ಪ್ರತಿಮೆಗೆ ಅಪಮಾನ ಮಾಡಿದ್ದು ಸಹ ಕೈ ಕಾರ್ಯಕರ್ತರು. ಎಂಇಎಸ್ ಪುಂಡಾಟಿಕೆಯ ಹಿಂದ ಕಾಂಗ್ರೆಸ್ ಇದೆ. ಸಂಘರ್ಷ ಉಂಟು ಮಾಡಿ ರಾಜಕೀಯ ದುರ್ಲಾಭ ಪಡೆಯುವ ಷಡ್ಯಂತ್ರ ನಡೆಸಿದ್ಧಾರೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಜಮೀರ್ ಅಹ್ಮದ್ ಕಟ್ಟಾ ಬೆಂಬಲಿಗರಿಂದಲೇ ಕೃತ್ಯ ನಡೆಸಲಾಗಿದೆ" ಎಂದು ಕಿಡಿಕಾರಿದ್ದಾರೆ.
"ಸಂಗೊಳ್ಳಿ ರಾಯಣ್ಣ, ಬಸವೇಶ್ವರ ಪ್ರತಿಮೆಗೆ ಅಪಮಾನ ಮಾಡಿದ್ದು ಸಹ ಕಾಂಗ್ರೆಸ್. ಜಾತಿ ಸಂಘರ್ಷ ಹಾಗೂ ಭಾಷಾ ಸಂಘರ್ಷವನ್ನು ಹುಟ್ಟು ಹಾಕುವುದೇ ಇವರ ಉದ್ದೇಶ. ಈ ಷಡ್ಯಂತ್ರವನ್ನು ಬಯಲಿಗೆಳೆಯಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಆಗ್ರಹ ಮಾಡುತ್ತೇನೆ"ಎಂದಿದ್ದಾರೆ.