ಶಿವಮೊಗ್ಗ, ಡಿ.20 (DaijiworldNews/HR): 2010ರಲ್ಲಿ ಮೃತಪಟ್ಟಿದ್ದಾಳೆ ಎನ್ನಲಾದ ನಕ್ಸಲ್ನಾಯಕಿ ಹೊಸಗದ್ದೆ ಪ್ರಭಾ ಸಾರ್ವಜನಿಕರ ಎದುರು ಕಾಣಿಸಿಕೊಂಡಿದ್ದಾಳಲ್ಲದೆ ಇದೀಗ ತಮಿಳುನಾಡು ಪೊಲೀಸರಿಗೆ ಶರಣಾಗಿದ್ದಾಳೆ.
ಪತಿ ನಕ್ಸಲ್ ಮುಖಂಡ ಬಿ.ಜಿ.ಕೃಷ್ಣಮೂರ್ತಿ ಬಂಧನದ ಬೆನ್ನಲ್ಲೇ ಪತ್ನಿ ಹೊಸಗದ್ದೆ ಪ್ರಭಾ ತಮಿಳುನಾಡು ವೆಲ್ಲೂರು ಪೊಲೀಸರಿಗೆ ಶರಣಾಗತಿಯಾಗಿದ್ದಾಳೆ. ಪತಿ ಬಂಧನದ ನಂತರ ಮಾನಸಿಕ ಖಿನ್ನತೆಗೊಳಗಾಗಿದ್ದ ಪ್ರಭಾ ಅನಾರೋಗ್ಯದಿಂದ ಬಳಲುತ್ತಿದ್ದು, ಪತಿ ಕೃಷ್ಣಮೂರ್ತಿ ಬಂಧನದ ಬಳಿಕ ತಾನೂ ಪೊಲೀಸರಿಗೆ ಶರಣಾಗಿದ್ದಾಳೆ.
ಪ್ರಭಾ ಮೂಲತಃ ಆಗುಂಬೆ ಸಮೀಪದ ಹೊಸಗದ್ದೆ ಗ್ರಾಮದವಳಾಗಿದ್ದು, ನಕ್ಸಲ್ ಸಂಘಟನೆಯಲ್ಲಿ ಮಂಚೂಣಿಯಲ್ಲಿದ್ದಳು. ಮಲೆನಾಡಿನಲ್ಲಿ ನಕ್ಸಲ್ ಸಂಘಟನೆ ಉತ್ತುಂಗದಲ್ಲಿದ್ದ ಸಂದರ್ಭದಲ್ಲಿ ಸಂಘಟನೆ ಮುನ್ನಡೆಸುತ್ತಿದ್ದಳು.
ಇನ್ನು 2010ರಲ್ಲಿ ನಕ್ಸಲ್ ಪ್ರಭಾ ಮೃತಪಟ್ಟಿದ್ದಾಳೆ ಎಂಬ ಸುದ್ದಿ ಹರಡಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ಗ್ರಾಮದ ಮುಖಂಡರೊಬ್ಬರಿಗೆ ಪ್ರಭಾ ಮೃತಪಟ್ಟಿದ್ದು, ಆಕೆಗೆ ಶ್ರದ್ಧಾಂಜಲಿ ಅರ್ಪಿಸಿ ಎಂದು ದೂರವಾಣಿ ಕರೆಯೊಂದು ಬಂದಿತ್ತು. ಹೀಗಾಗಿ ಪೊಲೀಸರು ಕೂಡ ಪ್ರಭಾ ಮೃತಪಟ್ಟಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದರು. ಆದರೆ ಆಕೆಯ ಶವ ಸಿಗದೆ ಮೃತ ಎಂದು ಘೋಷಿಸಲು ಸಾಧ್ಯವಿಲ್ಲ ಎಂದು ಅಂದಿನ ಎಸ್ಪಿ ಮುರುಗನ್ ಹೇಳಿದ್ದರು.
ಮಲೆನಾಡಿನಿಂದ ಕಣ್ಮರೆಯಾಗಿದ್ದ ಪ್ರಭಾ ಕೇರಳದ ನಕ್ಸಲ್ ಸಂಘಟನೆಯಲ್ಲಿ ಸಕ್ರಿಯಳಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಪತಿ ಬಿ.ಜಿ. ಕೃಷ್ಣಮೂರ್ತಿ, ಪ್ರಭಾ, ಸಾವಿತ್ರಿ, ವಿಕ್ರಂ ಗೌಡ ಸೇರಿ ಮಲೆನಾಡಿನ ನಕ್ಸಲರೆಲ್ಲರೂ ಕೇರಳದಲ್ಲಿ ಆಶ್ರಯ ಪಡೆದಿದ್ದರು.
ಇನ್ನು ನಕ್ಸಲರ ಜಾಡಿನ ಮಾಹಿತಿ ಪೊಲೀಸರಿಗೆ ಲಭಿಸತೊಡಗಿದ್ದು, ಕಳೆದ ತಿಂಗಳಷ್ಟೆ ಬಿ.ಜಿ. ಕೃಷ್ಣಮೂರ್ತಿ, ಸಾವಿತ್ರಿ ಕೇರಳ ಪೊಲೀಸರಿಂದ ಬಂಧನಕ್ಕೊಳಗಾದರು. ಇದಾದ ಒಂದು ತಿಂಗಳಲ್ಲಿ ಪ್ರಭಾ ತಮಿಳುನಾಡು ಪೊಲೀಸರಿಗೆ ಶರಣಾಗಿದ್ದಾಳೆ.
ಪ್ರಭಾ ವಿರುದ್ಧ ರಾಜ್ಯದಲ್ಲಿ 40ಕ್ಕೂ ಹೆಚ್ಚು ಕೇಸ್ಗಳಿದ್ದು, ಶಿವಮೊಗ್ಗದಲ್ಲಿ ತಲ್ಲೂರು ಅಂಗಡಿ, ಬಸ್ ಸುಟ್ಟ ಪ್ರಕರಣ ಸೇರಿದಂತೆ ಶಿವಮೊಗ್ಗದಲ್ಲಿ ನಾಲ್ಕು ಪ್ರಕರಣಗಳು ದಾಖಲಾಗಿದೆ.