ಬೆಂಗಳೂರು, ಡಿ.20 (DaijiworldNews/PY): "ಎಂಇಎಸ್ ಸಂಘಟನೆಯನ್ನು ನಿಷೇಧಿಸಬೇಕೆಂದು ಈಗ ರಾಜ್ಯ ಒಕ್ಕೊರಲಿನಿಂದ ಕೇಳುತ್ತಿದೆ. ಸರ್ಕಾರ ಈ ಒತ್ತಾಯವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ತೆಗೆದಿಕೊಳ್ಳಲಿ" ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಬೆಳಗಾವಿಯಲ್ಲಿ ಯಾವಾಗ ಅಧಿವೇಶನ ನಡೆದರೂ ಎಂಇಎಸ್ ನವರು ಸಂಘರ್ಷ ಹುಟ್ಟು ಹಾಕಲೆಂದು ಮಹಾ ಮೇಳಾವ್ ಆಯೋಜಿಸುತ್ತಾರೆ. ಶಾಂತಿ ಕದಡುವ ಉದ್ದೇಶದಿಂದಲೇ ಎಂಇಎಸ್ ಮಹಾ ಮೇಳಾವ್ ಆಯೋಜಿಸುತ್ತದೆ. ಇದು ಪ್ರತಿವರ್ಷ ನಡೆಯುತ್ತದೆ. ಈ ಬಗ್ಗೆ ಸರ್ಕಾರಕ್ಕೆ ವಿಶೇಷ ಗೂಢಚರ್ಯೆ ಬೇಕಾಗಿಲ್ಲ. ಸರ್ಕಾರ ಮೊದಲೇ ಎಚ್ಚೆತ್ತು ಬಿಗಿಯಾದ ಕ್ರಮ ತೆಗೆದುಕೊಳ್ಳುವ ಅವಕಾಶವಿತ್ತು" ಎಂದಿದ್ದಾರೆ.
"ಅಧಿವೇಶನ ನಡೆಯುವ ಬೆಳಗಾವಿಯಲ್ಲಿ ಇಡೀ ಸರ್ಕಾರವೇ ಇರುವಾಗ ಸಹಜವಾಗಿಯೇ ಬಿಗಿಯಾದ ಬಂದೋಬಸ್ತ್ ಇರುತ್ತದೆ. ಆದರೂ ಬೆಳಗಾವಿಯಲ್ಲಿ ರಾಯಣ್ಣ ಪ್ರತಿಮೆ ದ್ವಂಸದಂತಹ ಘಟನೆ ನಡೆದಿದೆ. ಇದು ಸರ್ಕಾರದ ಸಂಪೂರ್ಣ ಕಾನೂನು ಸುವ್ಯವಸ್ಥೆಯ ವೈಫಲ್ಯ. ಗೃಹ ಸಚಿವ ಅರಗ ಜ್ಞಾನೆಂದ್ರರವರಿಗೆ ತಮ್ಮ ಇಲಾಖೆಯ ಮೇಲಿನ ಹಿಡಿತ ತಪ್ಪಿದೆಯೆ? ಈ ವೈಫಲ್ಯಕ್ಕೆ ಕಾರಣವೇನು?" ಎಂದು ಪ್ರಶ್ನಿಸಿದ್ದಾರೆ.
"ಎಂಇಎಸ್ ಸಂಘಟನೆಯನ್ನು ನಿಷೇಧಿಸಬೇಕೆಂದು ಈಗ ರಾಜ್ಯ ಒಕ್ಕೊರಲಿನಿಂದ ಕೇಳುತ್ತಿದೆ. ಸರ್ಕಾರ ಈ ಒತ್ತಾಯವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ತೆಗೆದಿಕೊಳ್ಳಲಿ. ಯಾವುದೇ ಸಂಘಟನೆ ಈ ರಾಜ್ಯದ ಸ್ವಾಭಿಮಾನ, ಸಾರ್ವಭೌಮತೆ, ಘನತೆ ಹಾಗೂ ಗೌರವಕ್ಕೆ ಧಕ್ಕೆ ತಂದರೆ ಅಂತಹ ಸಂಘಟನೆಯ ಅಸ್ತಿತ್ವ ಒಪ್ಪಲು ಸಾಧ್ಯವಿಲ. ಇದು ನಮ್ಮ ಅಸ್ಮಿತೆಯ ಪ್ರಶ್ನೆ" ಎಂದಿದ್ದಾರೆ.