ಬೆಂಗಳೂರು, ಡಿ.20 (DaijiworldNews/PY): "ಪ್ರತಿಮೆ ಭಗ್ನ ಮಾಡುವವರೂ ನೀವೇ, ಗೌರವ ಸಲ್ಲಿಸುವವರೂ ನೀವೇ. ಇದೆಲ್ಲ ಹೇಗೆ ಸಾಧ್ಯ?" ಎಂದು ಬಿಜೆಪಿ, ವಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಪ್ರಶ್ನಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ, "ಮಹಾರಾಷ್ಟ್ರದಲ್ಲಿ ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿದ್ದು ಕಾಂಗ್ರೆಸ್ ಕಾರ್ಯಕರ್ತರು. ಕನ್ನಡಿಗರ ವಾಹನ ಪುಡಿಮಾಡಿದ್ದು ಕಾಂಗ್ರೆಸ್ ಕಾರ್ಯಕರ್ತರು. ಶಿವಾಜಿ ಪ್ರತಿಮೆಗೆ ಮಸಿ ಬಳಿದಿದ್ದು ಕಾಂಗ್ರೆಸ್ ಕಾರ್ಯಕರ್ತರು. ಮೂರೂ ಘಟನೆಗಳ ಸೂತ್ರದಾರರು ಈಗ ಘಟನೆಯ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ" ಎಂದಿದೆ.
"ಸಿದ್ದರಾಮಯ್ಯನವರೇ, ಪ್ರತಿಮೆ ಭಗ್ನ ಮಾಡುವವರೂ ನೀವೇ, ಗೌರವ ಸಲ್ಲಿಸುವವರೂ ನೀವೇ. ಇದೆಲ್ಲ ಹೇಗೆ ಸಾಧ್ಯ? ಮಹಾರಾಷ್ಟ್ರದಲ್ಲಿರುವ ಆಡಳಿತ ಪಕ್ಷ ಕನ್ನಡ ಬಾವುಟ ಸುಡುತ್ತದೆ, ಕನ್ನಡಿಗರ ವಾಹನ ಧ್ವಂಸ ಮಾಡುತ್ತದೆ. ಕರ್ನಾಟಕದ ವಿರೋಧ ಪಕ್ಷ ಶಿವಾಜಿ ಪ್ರತಿಮೆಗೆ ಮಸಿ ಬಳಿಯುತ್ತಿದೆ. ಕ್ರಿಯೆ ಮತ್ತು ಪ್ರತಿಕ್ರಿಯೆ ಎರಡೂ ಕೆಪಿಸಿಸಿ ಕಚೇರಿಯಿಂದ ಹೊರಟ ಆಜ್ಞೆ" ಎಂದು ಹೇಳಿದೆ.
"ಬೆಳಗಾವಿ ಘಟನೆಯ ಬಗ್ಗೆ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಆದರೆ ಕಾಂಗ್ರೆಸ್ ಗೊಂದಲದ ಗೂಡಾಗಿದೆ. ವಿಪಕ್ಷ ನಾಯಕ ಎಂಇಎಸ್ ಬಗ್ಗೆ ಕಠಿಣ ನಿಲುವು ತಾಳಿದ್ದರೆ, ಕೆಪಿಸಿಸಿ ಅಧ್ಯಕ್ಷರು ಮೃದು ಧೋರಣೆ ಹೊಂದಿದ್ದಾರೆ. ಬೆಳಗಾವಿ ಭಾಗದಲ್ಲಿ ಪ್ರಭಾವಿಯಾಗಿರುವ ಕಾಂಗ್ರೆಸ್ ಶಾಸಕಿಯ ಮಾತನ್ನು ಕೆಪಿಸಿಸಿ ಅಧ್ಯಕ್ಷ ಪಾಲಿಸುತ್ತಿದ್ದಾರೆಯೇ?" ಎಂದು ಪ್ರಶ್ನಿಸಿದೆ.
"ಸಿದ್ದರಾಮಯ್ಯನವರೇ, ನೀವು ಎಂಇಎಸ್ ನಿಷೇಧ ಮಾಡುವ ವಿಚಾರದ ಬಗ್ಗೆ ಮಾತನಾಡುತ್ತಿದ್ದೀರಿ. ಆದರೆ ನಿಮ್ಮ ಪಕ್ಷದ ರಾಜ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಎಂಇಎಸ್ಗೆ ಕ್ಲೀನ್ ಚಿಟ್ ಕೊಟ್ಟಿದ್ದಾರೆ. ಅಧಿವೇಶನದಲ್ಲಿ ಚರ್ಚೆ ಆರಂಭಿಸುವುದಕ್ಕೂ ಮುನ್ನ ಒಮ್ಮೆ ನಿಮ್ಮ ರಾಷ್ಟ್ರೀಯ ಅಧ್ಯಕ್ಷರ ಜೊತೆಗೂ ಚರ್ಚೆ ಮಾಡಿ ಬಿಡಿ" ಎಂದಿದೆ.
"ಸಿದ್ದರಾಮಯ್ಯನವರೇ, ನಾಡು, ನುಡಿಯ ವಿಚಾರದಲ್ಲಿ ಕಾಂಗ್ರೆಸ್ ಅಧ್ಯಕ್ಷರ ದ್ವಂದ್ವ ನಿಲುವಿನ ಬಗ್ಗೆ ನಿಮ್ಮ ಅಭಿಪ್ರಾಯವೇನು? ಅಧಿವೇಶನದಲ್ಲಿ ಎಂಇಎಸ್ಗೆ ಕ್ಲೀನ್ ಚಿಟ್ ನೀಡಲು ನೀವೂ ಸಿದ್ದರಾಗಿದ್ದೀರಾ? "ಎಂದು ಪ್ರಶ್ನಿಸಿದೆ.
ಕಾಂಗ್ರೆಸ್ ಪ್ರತಿಪಾದಿಸುತ್ತಿರುವ ಕ್ರಿಯೆ ಮತ್ತು ಪ್ರತಿಕ್ರಿಯೆಗೆ ಉದಾಹರಣೆ. ಬೆಳಗಾವಿಯಲ್ಲಿ ಎಂಇಎಸ್ ಭಾಷಾ ಸೌಹಾರ್ದತೆ ಕೆಡಿಸುವುದು "ಕ್ರಿಯೆ". ಸಿದ್ದರಾಮಯ್ಯ ಹಾಗೂ ಡಿಕೆಶಿ ಕ್ಲೀನ್ ಚಿಟ್ ನೀಡುವುದು "ಪ್ರತಿಕ್ರಿಯೆ" ಎಂದು ಹೇಳಿದೆ.