ಬೆಳಗಾವಿ, ಡಿ 20 (DaijiworldNews/MS): ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಧ್ವಂಸಗೊಳಿಸಿದ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮತ್ತು ಶಿವಸೇನೆ ಕಾರ್ಯಕರ್ತರ ಕೃತ್ಯ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆಯು ಬೆಳಗಾವಿಯಲ್ಲಿ ಪ್ರತಿಭಟನೆ ಹಾಗೂ ಸುವರ್ಣ ಸೌಧ ಮುತ್ತಿಗೆ ಕರೆ ನೀಡಿದೆ.
ಕರವೇ ಪ್ರವಿಣ್ ಶೆಟ್ಟಿ ಬಣವೂ ಕರವೇ ನಡೆ ಬೆಳಗಾವಿ ಕಡೆ ಸ್ಲೋಗನ್ ಅಡಿಯಲ್ಲಿ ಕರೆ ನೀಡಿದ್ದು ಹೋರಾಟಕ್ಕಿಳಿದಿದ್ದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇನ್ನೊಂದೆಡೆ ನಿನ್ನೆ ಚಾಲನೆ ನೀಡಲಾಗಿದ್ದ ಸುವರ್ಣ ಸೌಧ ಮುತ್ತಿಗೆ ಚಲೋ, ಇಂದು ಬೆಳಗಾವಿಯನ್ನು ತಲುಪಿತು. ಬೆಳಗಾವಿಯ ಆಗಮಿಸಿದ ಕರವೇ ಅಧ್ಯಕ್ಷ ನಾರಾಯಣಗೌಡರನ್ನು ಹಿರೇಬಾಗೇವಾಡಿ ಟೋಲ್ ಬಳಿ ಪೊಲೀಸರು ತಡೆದರು. ಈ ಬಳಿಕ ವಾಹನದಿಂದ ಇಳಿದು ಪಾದಯಾತ್ರೆಯ ಮೂಲಕವೇ ಸುವರ್ಣ ಸೌಧ ಮುತ್ತಿಗೆಗಾಗಿ ಕರವೇ ನಾರಾಯಣಗೌಡ ಹಾಗೂ ಕಾರ್ಯಕರ್ತರು ಎಂಇಎಸ್ ವಿರುದ್ಧ ಘೋಷಣೆ ಕೂಗುತ್ತಾ ಆಗಮಿಸಿದರು. ಸುವರ್ಣ ಸೌಧ ಸಮೀಪಕ್ಕೂ ಮುನ್ನವೇ ಅವರನ್ನು ಪೊಲೀಸರು ತಡೆದು ವಶಕ್ಕೆ ಪಡೆದರು. ಅಲ್ಲದೇ ನೂರಾರು ಕಾರ್ಯಕರ್ತರನ್ನು ಕೂಡ ವಶಕ್ಕೆ ಪಡೆದುಕೊಂಡರು.
ಈ ವೇಳೆ ಮಾತನಾಡಿದ ನಾರಾಯಣಗೌಡ, ಎಂಇಎಸ್ ಸಂಘಟನೆಯನ್ನು ರಾಜ್ಯದಲ್ಲಿ ಬ್ಯಾನ್ ಮಾಡೋವರೆಗೆ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಹೇಳಿದರು.