ನವದೆಹಲಿ, ಡಿ.20 (DaijiworldNews/PY): ಉತ್ತರಪ್ರದೇಶದ ಪ್ರಾಥಮಿಕ ಶಾಲೆಗಳಲ್ಲಿ ಸಂತೋಷದ ಪಠ್ಯಕ್ರಮ ಜಾರಿಗೆ ತರಲಾಗುತ್ತದೆ ಎನ್ನುವ ವಿಚಾರದ ನಡುವೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಯೋಗಿ ಆದಿತ್ಯನಾಥ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, "ಯೋಗಿ ಆದಿತ್ಯನಾಥ್ ಎಎಪಿ ಪಕ್ಷವನ್ನು ನಕಲು ಮಾಡುತ್ತಿದ್ದಾರೆಯೇ?" ಎಂದು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಯೋಗಿ ಸರ್ಕಾರ ಎಎಪಿಯನ್ನು ನಕಲು ಮಾಡುತ್ತಿದೆಯೇ?" ಎಂದು ಕೇಳಿದ್ಧಾರೆ.
ವಿದ್ಯಾರ್ಥಿಗಳನ್ನು ಪ್ರಕೃತಿ, ಸಮಾಜ ಮತ್ತು ದೇಶದ ಬಗ್ಗೆ ಹೆಚ್ಚು ಸಂವೇದನಾಶೀಲರನ್ನಾಗಿಸಲು ಉತ್ತರ ಪ್ರದೇಶ ಸರ್ಕಾರ ಪ್ರಾಯೋಗಿಕ ಯೋಜನೆಯಡಿ ಶಾಲೆಗಳಲ್ಲಿ 'ಸಂತೋಷ ಪಠ್ಯಕ್ರಮ'ವನ್ನು ಜಾರಿಗೆ ತರಲು ಯೋಜಿಸುತ್ತಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
"ಉತ್ತರ ಪ್ರದೇಶದ ಭೌಗೋಳಿಕ ಮತ್ತು ಸಾಂಸ್ಕೃತಿಕ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಈ ಕೋರ್ಸ್ ಅನ್ನು ರೂಪಿಸಲಾಗುತ್ತಿದೆ" ಎಂದು ರಾಜ್ಯ ಉಸ್ತುವಾರಿ ಸೌರಭ್ ಮಾಳವಿಯಾ ತಿಳಿಸಿದ್ದಾರೆ.
"1-8ನೇ ತರಗತಿ ವಿದ್ಯಾರ್ಥಿಗಳಿಗೆ ಈ ಪಠ್ಯಕ್ರಮವಿರಲಿದೆ. 1-5ನೇ ತರಗತಿ ವಿದ್ಯಾರ್ಥಿಗಳಿಗಾಗಿ 5 ಪುಸ್ತಕಗಳನ್ನು ತಯಾರಿಸಲಾಗುತ್ತಿದೆ. ಮೊದಲ ಹಂತದಲ್ಲಿ ಈ ಯೋಜನೆಯನ್ನು 15 ಜಿಲ್ಲೆಗಳ ಶಾಲೆಗಳಲ್ಲಿ ಮಾತ್ರವೇ ಜಾರಿಗೆ ತರಲಾಗುವುದು" ಎಂದು ಹೇಳಿದ್ದಾರೆ.