ಬೆಳಗಾವಿ,ಡಿ.20 (DaijiworldNews/HR): ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದ್ದು ಇಲಾಖೆ ಕೂಡ ಸತ್ತು ಹೋಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಅನಗೋಳದಲ್ಲಿ ಮರುಪ್ರತಿಷ್ಠಾಪನೆ ಆಗಿರುವ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ನಮಸ್ಕರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಆಯುಧಗಳನ್ನು ಹಿಡಿದುಕೊಂಡು ಬಂದು ಮೂರ್ತಿ ವಿರೂಪಗೊಳಿಸಿದ್ದು ನೋಡಿದರೆ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ ಎಂದು ಅರ್ಥ. ಪೊಲೀಸರ ಬಗ್ಗೆ ಅವರಿಗೆ ಭಯ ಇಲ್ಲ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ" ಎಂದರು.
ಇನ್ನು ಸಂಗೊಳ್ಳಿ ರಾಯಣ್ಣ ಒಂದು ಜಾತಿಗೆ ಸೀಮಿತರಲ್ಲ. ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ರಾಷ್ಟ್ರಭಕ್ತ, ಸ್ವಾತಂತ್ರ್ಯ ಹೋರಾಟಗಾರನ ಪ್ರತಿಮೆ ಭಗ್ನಗೊಳಿಸಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಕಾರಣರಾದವರ ವಿರುದ್ದ ಕಠಿಣ ಕ್ರಮ ಕೈಗೊಳಬೇಕು ಎಂದು ಆಗ್ರಹಿಸಿದ್ದಾರೆ.