ತಿರುವನಂತಪುರಂ, ಡಿ.20 (DaijiworldNews/PY): ಕೇರಳದ ಕೋಝಿಕ್ಕೋಡ್ ಪೊಲೀಸರು ಮಾಜಿ ಅಥ್ಲೀಟ್ ಪಿ ಟಿ ಉಷಾ ವಿರುದ್ದ ವಂಚನೆ ಪ್ರಕರಣ ದಾಖಲಿಸಿದ್ದಾರೆ.
ಮಾಜಿ ಅಥ್ಲೀಟ್ ಜೆಮ್ಮಾ ಜೋಸೆಫ್ ನೀಡಿದ ದೂರಿನ ಮೇರೆಗೆ ಪಿ ಟಿ ಉಷಾ ಸೇರಿ ಇತರ ಆರು ಮಂದಿಯ ವಿರುದ್ದ ಐಪಿಸಿ ಸೆಕ್ಷನ್ 420ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಪೊಲೀಸರ ಪ್ರಕಾರ, ಜೆಮ್ಮಾ ಜೋಸೆಫ್ ಅವರು ಹೊಸ ಅಪಾರ್ಟ್ಮೆಂಟ್ ಹೊಂದುವ ನಿರೀಕ್ಷೆಯಲ್ಲಿ 46 ಲಕ್ಷ ರೂ.ಗಳನ್ನು ಪಾವತಿಸಿದ್ದು, ಪಿ ಟಿ ಉಷಾ ಅವರ ಖಾತರಿಯಂತೆ ಕೇರಳದ ಕೋಝಿಕ್ಕೋಡ್ನಲ್ಲಿ 1,012 ಚದರ ಅಡಿ ಫ್ಲಾಟ್ ಅನ್ನು ಬಿಲ್ಡರ್ ಒಬ್ಬರಿಂದ ಖರೀದಿಸಿದ್ದಾರೆ. ಆದರೆ, ನಿಗದಿತ ಸಮಯದಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಳಿಸುವುದಾಗಿ ಉಷಾ ನೀಡಿದ್ದ ಭರವಸೆ ಸುಳ್ಳಾಗಿದೆ ಎಂದು ಜೆಮ್ಮಾ ಜೋಸೆಫ್ ದೂರಿನಲ್ಲಿ ತಿಳಿಸಿದ್ದಾರೆ.
ಕಂತುಗಳು ರೂಪದಲ್ಲಿ ಜೆಮ್ಮಾ ಜೋಸೆಫ್ ಅವರು 46 ಲಕ್ಷ ರೂ.ಗಳನ್ನು ಪಾವತಿಸಿದ್ದಾರೆ. ಆದರೆ, ಹಣ ಪಾವತಿಸಿದರೂ ಬಿಲ್ಡರ್ ಜೋಸೆಫ್ಗೆ ಫ್ಲಾಟ್ ಬರೆದುಕೊಟ್ಟಿರಲಿಲ್ಲ. ಹಾಗಾಗಿ ಜೆಮ್ಮಾ ಜೋಸೆಫ್ ಅವರು ಪೊಲೀಸರ ಮೊರೆ ಹೋಗಿದ್ದಾರೆ. ಪಿ ಟಿ ಉಷಾ ಅವರು ನೀಡಿದ ಖಾತರಿಯಂತೆ ಬಿಲ್ಡರ್ಗೆ ಹಣ ಪಾವತಿಸಿದರೂ, ಬಿಲ್ಡರ್ ಫ್ಲಾಟ್ ನೀಡಲು ವಿಳಂಬ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ಧಾರೆ.
ಜೆಮ್ಮಾ ಜೋಸೆಫ್ ಅವರ ದೂರಿನಂತೆ ಜಿಲ್ಲಾ ಪೊಲೀಸ್ ಮುಖ್ಯಸ್ಥ ಎ ವಿ ಜಾರ್ಜ್ ಅವರು ತನಿಖೆಗೆ ಆದೇಶಿಸಿದ್ದು, ಪ್ರಕರಣವನ್ನು ವೆಲ್ಲೂರು ಪೊಲೀಸ್ ಠಾಣೆಗೆ ವರ್ಗಾಯಿಸಿದ್ದಾರೆ.