ದೆಹಲಿ, ಡಿ 20 (DaijiworldNews/MS): ದೆಹಲಿಯ ರೋಹಿಣಿ ಜಿಲ್ಲಾ ನ್ಯಾಯಾಲಯದಲ್ಲಿ ಡಿ 9ರಂದು ಸಂಭವಿಸಿದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಯಾಗಿದ್ದ ಡಿಆರ್ಡಿಒ ವಿಜ್ಞಾನಿ ಭರತ್ ಭೂಷಣ್ ಕಠಾರಿಯಾ (47) ಜೈಲಿನಲ್ಲಿಯೇ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ದೆಹಲಿಯ ಏಮ್ಸ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯ ಸ್ಥಿರವಾಗಿದೆ.
ಭರತ್ ಭೂಷಣ್ ಕಟಾರಿಯಾ ಎಂಬ ಡಿಆರ್ಡಿಒ ವಿಜ್ಞಾನಿಯನ್ನು ದೆಹಲಿಯ ಪೊಲೀಸ್ನ ವಿಶೇಷ ವಿಭಾಗ ಬಂಧಿಸಿದ್ದುಜೈಲಿನ ಸ್ನಾನದಕೋಣೆಯಲ್ಲಿದ್ದ ಹ್ಯಾಂಡ್ವಾಶ್ ನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ.
ರೋಹಿಣಿ ಕೋರ್ಟ್ನೊಳಗೆ ಟಿಫಿನ್ ಬಾಕ್ಸ್ನಲ್ಲಿ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಇಟ್ಟು ಸ್ಫೋಟಿಸಿದ್ದರು. ವಿಜ್ಞಾನಿ ಕಠಾರಿಯಾ ಮತ್ತು ಅವರ ನೆರೆಮನೆಯವರಾದ ವಕೀಲ ಅಮಿತ್ ವಸಿಷ್ಠ ಅವರ ನಡುವೆ ಹಳೆಯ ಭಿನ್ನಾಭಿಪ್ರಾಯವಿತ್ತು. ಅದೇ ಕಾರಣಕ್ಕೆ ವಕೀಲನ ಸೋಗಿನಲ್ಲಿ ಕಠಾರಿಯಾ ನ್ಯಾಯಾಲಯಕ್ಕೆ ಪ್ರವೇಶಿಸಿ, ಬಾಂಬ್ ಇಟ್ಟು, ಸ್ಫೋಟದ ನಂತರ ಪರಾರಿಯಾಗಿದ್ದರು. ನೀರು ಸರಬರಾಜು ಸೇರಿದಂತೆ ಹಲವು ವಿಷಯಗಳಲ್ಲಿ ಪರಸ್ಪರರ ವಿರುದ್ಧ ಹಲವಾರು ಪ್ರಕರಣಗಳನ್ನು ದಾಖಲಿಸಲಾಗಿತ್ತು ಎಂದು ತನಿಖೆಯಿಂದ ತಿಳಿದುಬಂದಿದ್ದಾಗಿ ಪೊಲೀಸರು ಹೇಳಿದ್ದರು. ಅಷ್ಟೇ ಅಲ್ಲ, ಕಠಾರಿಯಾ ಕೂಡ ಬಂಧಿಸಲ್ಪಡುತ್ತಿದ್ದಂತೆ ತಾವೇ ಸ್ಫೋಟಿಸಿದ್ದಾಗಿ ಒಪ್ಪಿಕೊಂಡಿದ್ದರು.