ಹಾವೇರಿ, ಡಿ.19 (DaijiworldNews/HR): ಜೀವನದಲ್ಲಿ ಯಾವುದೂ ಶಾಶ್ವತ ಅಲ್ಲ. ಈ ಸ್ಥಾನಮಾನಗಳೂ ಶಾಶ್ವತ ಅಲ್ಲ. ಈ ಅರಿವು ನಮಗೆ ಪ್ರತಿ ಕ್ಷಣ ಇರಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾವುಕರಾಗಿ ಹೇಳಿದ್ದಾರೆ.
ಶಿಗ್ಗಾವಿ ಪಟ್ಟಣದಲ್ಲಿ ವೀರರಾಣಿ ಕಿತ್ತೂರ ಚನ್ನಮ್ಮ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, "ಈ ಕ್ಷೇತ್ರದ ಹೊರಗೆ ನಾನು ಗೃಹ ಮಂತ್ರಿ, ನೀರಾವರಿ ಸಚಿವ, ಸಿಎಂ ಆದರೆ ಶಿಗ್ಗಾವಿಗೆ ಬಂದಾಗ ಬರೀ ಬಸವರಾಜ ಬೊಮ್ಮಾಯಿ ಅಷ್ಟೇ. ಇಲ್ಲಿ ಬಸವರಾಜ ಬೊಮ್ಮಾಯಿ ಅನ್ನೋದಷ್ಟೆ ಶಾಶ್ವತ, ಉಳಿದೆಲ್ಲಾ ಅಧಿಕಾರ ಪದವಿ ಶಾಶ್ವತ ಅಲ್ಲ" ಎಂದರು.
ಇನ್ನು "ಭಾವನಾತ್ಮಕವಾಗಿ ಮಾತಾಡಬಾರದು ಅಂತ ನಾನು ಬಹಳ ಪ್ರಯತ್ನ ಮಾಡುತ್ತೇನೆ. ಆದರೆ ನಿಮ್ಮನ್ನು ನೋಡಿದಾಗ ಆ ಭಾವನೆ ಬರುತ್ತವೆ. ದೊಡ್ಡ ಜವಾಬ್ದಾರಿ ನನ್ನ ಮೇಲಿದೆ. ನಿಮ್ಮ ಆಶೀರ್ವಾದ ಶಕ್ತಿ ಇಲ್ಲಿವರೆಗೂ ತಂದು ನಿಲ್ಲಿಸಿದೆ" ಎಂದಿದ್ದಾರೆ.
"ಇದು ಸಂತರ ನಾಡು, ಇಲ್ಲಿ ವೈಚಾರಿಕ ಕ್ರಾಂತಿಯನ್ನ ಮಾಡಿದ ಗುರುಗಳಿದ್ದಾರೆ. ಕನಕದಾಸರು, ಸಂತ ಶಿಶುನಾಳ ಶರೀಫರು ಇದ್ದ ತಾಲೂಕು" ಎಂದು ಹೇಳಿದ್ದಾರೆ.