ಶಿವಮೊಗ್ಗ, ಡಿ.19 (DaijiworldNews/HR): ಕಾಂಗ್ರೆಸ್ ಹಾಗೂ ಶಿವಸೇನೆ ಮಹಾರಾಷ್ಟ್ರದಲ್ಲಿ ಸರ್ಕಾರ ನಡೆಸುತ್ತಿದ್ದು, ಮಹಾರಾಷ್ಟ್ರ ಸಿಎಂ ಹೀಗೆ ಪತ್ರ ಬರೆದಿದ್ದಕ್ಕೆ ರಾಜ್ಯದ ಕಾಂಗ್ರೆಸ್ ನವರು ಉತ್ತರ ಕೊಡಬೇಕು. ಅವರು ಏನು ಉತ್ತರ ಕೊಡ್ತಾರೆ ನೋಡಬೇಕಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾಷೆ, ನೆಲ, ಜಲ, ಮಹಾಪುರುಷರ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಕಾರಣ ಬರಬಾರದು. ಮಹಾರಾಷ್ಟ್ರ ಸಿಎಂ ಪತ್ರ ಬರೆದಿದ್ದಕ್ಕೆ ಪ್ರಧಾನಿ ಮೋದಿಯವರು ಸರಿಯಾದ ಉತ್ತರವನ್ನೇ ಕೊಡುತ್ತಾರೆ" ಎಂದರು.
ಇನ್ನು "ಬೆಳಗಾವಿಯಲ್ಲಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಗೊಂದಲ ಮೂಡಿಸುವ ಕೆಲಸ ಮಾಡುತ್ತಿದ್ದು, ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸದಂತಹ ಬೇರೆ ಬೇರೆ ಕುತಂತ್ರ ಮಾಡುತ್ತಿದ್ದಾರೆ. ಇದನ್ನು ನಿಭಾಯಿಸುವ ಶಕ್ತಿ ಗೃಹ ಸಚಿವ ಆರಗ ಜ್ಞಾನೇಂದ್ರಗಿದ್ದು, ಚೆನ್ನಾಗಿ ನಿಭಾಯಿಸುತ್ತಿದ್ದಾರೆ" ಎಂದಿದ್ದಾರೆ.
"ಈ ರೀತಿಯ ಕೆಟ್ಟ ಕೆಲಸ ಮಾಡುವವರಿಗೆ ರಾಜ್ಯ ಬಿಜೆಪಿ ಸರ್ಕಾರ ಸರಿಯಾದ ಉತ್ತರ ಕೊಡುತ್ತದೆ. ಕುತಂತ್ರ ಮಾಡುವ ವ್ಯಕ್ತಿಗಳ ಬಗ್ಗೆ ಸರ್ಕಾರ ಎಚ್ಚರವಾಗಿದೆ. ಜನರು ಸಹ ಎಚ್ಚರವಾಗಿರಬೇಕು" ಎಂದು ಹೇಳಿದ್ದಾರೆ.