ಬೆಂಗಳೂರು, ಡಿ.19 (Daijiworld/PY): "ಶಾಂತಿ ಕದಡುವುದೇ ನಾಡದ್ರೋಹಿ ಕಾಂಗ್ರೆಸ್ ಉದ್ದೇಶವಾಗಿದೆ" ಎಂದು ಬಿಜೆಪಿ ಕಿಡಿಕಾರಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ, "ಮಹಾರಾಷ್ಟ್ರದಲ್ಲಿ ಪುಂಡರೊಂದಿಗೆ ಸೇರಿಕೊಂಡು ಕನ್ನಡ ಧ್ವಜಕ್ಕೆ ಬೆಂಕಿ ಹಚ್ಚಿದ್ದು ಕಾಂಗ್ರೆಸ್ ಕಾರ್ಯಕರ್ತರು. ರಾಯಣ್ಣ ಪ್ರತಿಮೆಗೆ ಅವಮಾನ ಮಾಡಿದ್ದು, ಕಾಂಗ್ರೆಸ್ ಮಿತ್ರಪಕ್ಷ ಎಂಇಎಸ್. ಬೆಂಗಳೂರಿನಲ್ಲಿ ಶಿವಾಜಿ ಪ್ರತಿಮೆಗೆ ಮಸಿ ಬಳಿದಿದ್ದೂ ಕಾಂಗ್ರೆಸ್ ಕಾರ್ಯಕರ್ತರು. ಶಾಂತಿ ಕದಡುವುದೇ ನಾಡದ್ರೋಹಿ ಕಾಂಗ್ರೆಸ್ ಉದ್ದೇಶವಾಗಿದೆ" ಎಂದು ಆರೋಪಿಸಿದೆ.
"ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರೇ, ನಿಮ್ಮ ಹೋರಾಟಕ್ಕೆ ಜನ ಬೆಂಬಲ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಸಂಚು ರೂಪಿಸುತ್ತಿದ್ದೀರಾ? ಭಾಷೆ ಹಾಗೂ ಸ್ವಾತಂತ್ರ್ಯ ವೀರರಿಗೆ ಅಪಮಾನ ಮಾಡುವ ಷಡ್ಯಂತ್ರ ರೂಪುಗೊಂಡಿದ್ದು ಕಾಂಗ್ರೆಸ್ ವಾರ್ ರೂಮಿನಲ್ಲೇ?" ಎಂದು ಪ್ರಶ್ನಿಸಿದೆ.
ಭಾಷೆ ಹಾಗೂ ಭಾವನೆಗಳ ಮಧ್ಯೆ ಬೆಂಕಿ ಹಚ್ಚಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕಾಂಗ್ರೆಸ್ ಹವಣಿಸುತ್ತಿದೆ. ಈ ಸಂದರ್ಭದಲ್ಲಿ ಪ್ರತಿಯೊಬ್ಬ ಕನ್ನಡಿಗನೂ ಸಂಯಮ ಮೆರೆಯಬೇಕಿದೆ. ಇಲ್ಲವಾದರೆ "ಇದು ಕ್ರಿಯೆಗೆ ತಕ್ಕ ಪ್ರತಿಕ್ರಿಯೆ" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪರಿಸ್ಥಿತಿಯ ಲಾಭ ಪಡೆಯಲು ಯತ್ನಿಸುವ ಅಪಾಯವಿದೆ ಎಂದಿದೆ.
"ರಾಜ್ಯ ಸರ್ಕಾರದ ವಿರುದ್ಧ ವಿವಿಧ ಆಯಾಮಗಳಲ್ಲಿ ಅಪಪ್ರಚಾರದ ಸಂಚು ನಡೆಸುವುದಕ್ಕಾಗಿಯೇ ಕಾಂಗ್ರೆಸ್ ಬೆಳಗಾವಿ ಅಧಿವೇಶನದ ಸಮಯ ಬಳಸಿಕೊಳ್ಳುತ್ತಿದೆಯೇ? ಹೌದು, ಮೊದಲ ದಿನದಿಂದ ಇಲ್ಲಿಯವರೆಗೆ ಕಾಂಗ್ರೆಸ್ ಪಕ್ಷ ನಡೆದುಕೊಂಡ ರೀತಿ ಹಾಗೂ ಘಟನಾವಳಿಗಳು ಇದನ್ನೇ ಹೇಳುತ್ತಿವೆ" ಎಂದು ಹೇಳಿದೆ.
"ಕೆಂಪುಕೋಟೆಗೆ ಖಲಿಸ್ತಾನಿಗಳು, ನಗರ ನಕ್ಸಲರು ದಾಳಿ ನಡೆಸಿದ ರೀತಿ ಬೆಳಗಾವಿ ಅಧಿವೇಶನಕ್ಕೆ ಟ್ರ್ಯಾಕ್ಟರ್ ಮೂಲಕ ಪ್ರವೇಶಿಸಲು ಕಾಂಗ್ರೆಸ್ಸಿಗರು ಯತ್ನಿಸಿದರು. ಒಂದೊಮ್ಮೆ ನಾಡದ್ರೋಹಿಕಾಂಗ್ರೆಸ್ ಪ್ರಯತ್ನ ಸಫಲವಾಗಿ, ಕಾಂಗ್ರೆಸ್ ಕಾರ್ಯಕರ್ತರ ಮುಖವಾಡ ಧರಿಸಿ ಸಮಾಜ ವಿಘಟಕರು ಗುಂಪಿನಲ್ಲಿ ಸೇರಿಸಿದ್ದರೆ ಅಧಿವೇಶನದ ಕತೆ ಏನಾಗುತ್ತಿತ್ತು?" ಎಂದು ಕೇಳಿದೆ.
"ಉತ್ತರ ಕರ್ನಾಟಕ ಭಾಗದ ಸಮಸ್ಯೆ ಬಗ್ಗೆ ಚರ್ಚೆ ನಡೆಸುವುದಕ್ಕಾಗಿ ಬೆಳಗಾವಿಯಲ್ಲಿ ಅಧಿವೇಶನ ಆಯೋಜಿಸಲಾಗಿತ್ತು. ಆದರೆ ನಾಡದ್ರೋಹಿಕಾಂಗ್ರೆಸ್ ಒಂದು ದಿನವೂ ಕಲಾಪ ನಡೆಯುವುದಕ್ಕೂ ಅವಕಾಶ ನೀಡಲಿಲ್ಲ. ಪ್ರಶ್ನೋತ್ತರ ಕಲಾಪವನ್ನೂ ತಮ್ಮ ಪ್ರತಿಷ್ಠೆಗೆ ಬಲಿ ಪಡೆಯಲು ಮುಂದಾದರು. ಉತ್ತರ ಕರ್ನಾಟಕದ ಬಗ್ಗೆ ನಿಮಗಿರುವ ಬದ್ಧತೆಯೇ ಪ್ರಶ್ನಾರ್ಹವಾಗಿದೆ" ಎಂದಿದೆ.