ಲಕ್ನೋ, ಡಿ.19 (Daijiworld/PY): ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಸರ್ಕಾರದ ವಿರುದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾಗ್ದಾಳಿ ನಡೆಸಿದ್ದು, "ಬಿಜೆಪಿ ಸರ್ಕಾರ ಏಳು ವರ್ಷಗಳಲ್ಲಿ ರಾಷ್ಟ್ರಕ್ಕೆ ಏನು ಮಾಡಿದೆ?" ಎಂದು ಪ್ರಶ್ನಿಸಿದ್ದಾರೆ.
ಅಮೇಥಿಯಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, "ಸ್ವಾತಂತ್ರ್ಯ ಬಂದು 74 ವರ್ಷಗಳಾಗಿದ್ದು, ಕಾಂಗ್ರೆಸ್ ತನ್ನ ಆಡಳಿತದಲ್ಲಿ ಏನನ್ನೂ ಸಹ ಮಾಡಿಲ್ಲ ಎಂದು ಬಿಜೆಪಿ ಆಗಾಗ ಆರೋಪಿಸುತ್ತಿರುತ್ತದೆ. ಆದರೆ, ಬಿಜೆಪಿ ಸರ್ಕಾರ ಏಳು ವರ್ಷಗಳಿಂದ ಆಡಳಿತ ನಡೆಸುತ್ತಿದ್ದು, ಅಮೇಥಿಯಲ್ಲಿ ಸರ್ಕಾರ ಏನು ಮಾಡಿದೆ? ಜನರು ಬೆಲೆ ಏರಿಕೆಯಿಂದ ಸಂಕಷ್ಟಕ್ಕೊಳಗಾಗಿದ್ಧಾರೆ" ಎಂದು ಕಿಡಿಕಾರಿದ್ದಾರೆ.
"ಕೊರೊನಾದ ಮೊದಲ ಅಲೆಯ ವೇಳೆ ಬಿಜೆಪಿ ಏನು ಮಾಡಿದೆ?. ಪಕ್ಷವು ಆಕ್ಸಿಜನ್ ಕೊರತೆಗೆ ಕಾರಣವಾಗಿತ್ತು. ಎರಡನೇ ಅಲೆಯ ಸಂದರ್ಭ ಸಾವಿನ ಪ್ರಮಾಣ ಹೆಚ್ಚಾಗಿತ್ತು. ಅದರಲ್ಲೂ ಸಹ ಆಕ್ಸಿಜನ್ ಹಾಗೂ ವೈದ್ಯಕೀಯ ಚಿಕಿತ್ಸೆ ಕೊರತೆ ಹೆಚ್ಚಾಗಿತ್ತು" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಪ್ರತಿಭಟನಾ ರೈತರನ್ನು ಕೊಂದ ಆರೋಪ ಹೊತ್ತಿರುವ ಕಿರಿಯ ಗೃಹ ಸಚಿವ ಅಜಯ್ ಮಿಶ್ರಾ ತೇನಿ ಅವರನ್ನು ಏಕೆ ಇನ್ನೂ ವಜಾಗೊಳಿಸಿಲ್ಲ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾದಾಗಿನಿಂದ ಸುಳ್ಳಿನ ಜಾಲವನ್ನು ಹರಡುತ್ತಿದೆ" ಎಂದಿದ್ಧಾರೆ.