ಬೆಂಗಳೂರು, ಡಿ.19 (Daijiworld/PY): "ಮಹಾರಾಷ್ಟ್ರದಲ್ಲಿ ಕನ್ನಡ ಧ್ವಜಕ್ಕೆ ಬೆಂಕಿ ಇಟ್ಟವರು ಕಾಂಗ್ರೆಸ್ ಕಾರ್ಯಕರ್ತರು" ಎಂದು ಬಿಜೆಪಿ ಆರೋಪಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ, "ಮಹಾರಾಷ್ಟ್ರದಲ್ಲಿ ಕನ್ನಡ ಧ್ವಜಕ್ಕೆ ಬೆಂಕಿ ಇಟ್ಟವರು ಕಾಂಗ್ರೆಸ್ ಕಾರ್ಯಕರ್ತರು. ಬೆಂಗಳೂರಿನಲ್ಲಿ ಶಿವಾಜಿ ಪ್ರತಿಮೆಗೆ ಮಸಿ ಬಳಿದು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಸಂಚು ನಡೆಸಿದ್ದೂ ಕಾಂಗ್ರೆಸ್ ಕಾರ್ಯಕರ್ತರು. ಇವರ ಕೃತ್ಯ, ಉದ್ದೇಶ ಹಾಗೂ ಹಿಂದಿರುವ ಶಕ್ತಿಗಳು ಕಾಂಗ್ರೆಸ್ಸಿಗರೇ ಎನ್ನುವ ಸಂಶಯ ರಾಜ್ಯದ ಜನತೆಯನ್ನು ಕಾಡುತ್ತಿದೆ" ಎಂದಿದೆ.
"ಬೆಂಗಳೂರಿನಲ್ಲಿ ಶಿವಾಜಿ ಪ್ರತಿಮೆಗೆ ಮಸಿ ಬಳಿದ ಪ್ರಕರಣ ಹಾಗೂ ಮಹಾರಾಷ್ಟ್ರದಲ್ಲಿ ಕನ್ನಡ ಧ್ವಜ ಸುಟ್ಟಿದ್ದಕ್ಕೆ ಕೆಪಿಸಿಸಿ ಡಿ ಕೆ ಶಿವಕುಮಾರ್ ಅವರು ಏಕೆ ಪ್ರತಿಕ್ರಿಯೆ ನೀಡಿಲ್ಲ ಎನ್ನುವುದಕ್ಕೆ ಕಾರಣ ಸ್ಪಷ್ಟವಾಗಿದೆ. ಎಲ್ಲದಕ್ಕೂ ಉತ್ತರ ಒಂದೇ. ಅದರ ಹಿಂದಿರುವ ವ್ಯಕ್ತಿಗಳೆಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಕೆಪಿಸಿಸಿ ಅಧ್ಯಕ್ಷರ ಹಿಂದೆ ನಿಂತವರು "ಎಂದು ಹೇಳಿದೆ.
ಸಿದ್ದರಾಮಯ್ಯನವರೇ, ಬೆಂಗಳೂರಿನಲ್ಲಿ ಶಿವಾಜಿ ಪ್ರತಿಮೆಗೆ ಮಸಿ ಬಳಿದವರು ಯಾರಿಗೆ ಆಪ್ತರು ಎನ್ನುವುದನ್ನು ಗಮನಿಸಿ! ಈಗ ನಿಮ್ಮ "ಕ್ರಿಯೆಗೆ ತಕ್ಕ ಪ್ರತಿಕ್ರಿಯೆ" ಏನು? ಎಂದು ಪ್ರಶ್ನಿಸಿದೆ.