ರಾಂಚಿ, ಡಿ.18 (DaijiworldNews/HR): ಬಿಜೆಪಿ ಸಂಸದರೊಬ್ಬರು ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ನಡೆಯುತ್ತಿರುವ ಕುಸ್ತಿ ರಾಷ್ಟ್ರೀಯ ಚಾಂಪಿಯನ್ಷಿಪ್ ಪಂದ್ಯಾವಳಿಯಲ್ಲಿ ಯುವ ಕುಸ್ತಿಪಟುವಿನ ಕಪಾಳಕ್ಕೆ ಹೊಡೆದಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದೀಗ ವೈರಲ್ ಆಗಿದೆ.
ಕುಸ್ತಿ ಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷರೂ ಆಗಿರುವ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು, ವೇದಿಕೆಯಿಂದ ಕೆಳಗಿಳಿಯುವ ಮುನ್ನ ಎರಡು ಬಾರಿ ಯುವ ಕುಸ್ತಿಪಟುವಿನ ಕಪಾಳಕ್ಕೆ ಹೊಡೆದಿರುವ ದೃಶ್ಯವನ್ನು ನಾವು ವಿಡಿಯೊದಲ್ಲಿ ಕಾಣಬಹುದು.
ಇನ್ನು ಕುಸ್ತಿಪಟು ಒಬ್ಬರ ವಯಸ್ಸು 15 ವರ್ಷ ಮೇಲ್ಪಟ್ಟಿದ್ದರಿಂದ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶ ನೀಡಿರಲಿಲ್ಲ. ಆದರೂ ಆತ ತನಗೆ ಭಾಗವಹಿಸಲು ಅವಕಾಶ ನೀಡುವಂತೆ ಸಂಸದರಲ್ಲಿ ಕೇಳಿಕೊಂಡಿದ್ದು, ಈ ಸಂದರ್ಭ, ತಾಳ್ಮೆ ಕಳೆದುಕೊಂಡ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು, ಕುಸ್ತಿಪಟುವಿನ ಕಪಾಳಕ್ಕೆ ಬಾರಿಸಿದ್ಧಾರೆ ಎನ್ನಲಾಗಿದೆ.