ತಿರುವನಂತಪುರ, ಡಿ 18 (DaijiworldNews/MS): ಪೊಲೀಸ್ ಅಧಿಕಾರಿಗಳ ತಂಡದೊಂದಿಗೆ ಆರೋಪಿಯನ್ನು ಹಿಡಿಯಲೆಂದು ದೋಣಿಯಲ್ಲಿ ಪ್ರಯಾಣಿಸುತ್ತಿದ್ದಾಗ ಹಿನ್ನೀರಿನಲ್ಲಿ ದೋಣಿ ಪಲ್ಟಿಯಾಗಿ ಪರಿಣಾಮ ಕೇರಳ ಪೊಲೀಸ್ ಸಿಬ್ಬಂದಿಯೊಬ್ಬರು ಕರ್ತವ್ಯದಲ್ಲಿದಾಗಲೇ ಸಾವನ್ನಪ್ಪಿದ್ದಾರೆ ಎಂದು ಕೇರಳ ಪೊಲೀಸ್ ಇಲಾಖೆ ತಿಳಿಸಿದೆ. ಘಟನೆ ನಡೆದ ಸಂದರ್ಭ ಕೊಲೆ ಪ್ರಕರಣದ ಪ್ರಮುಖ ಆರೋಪಿ ರಾಜೇಶ್ಗಾಗಿ ಪೊಲೀಸ್ ತಂಡ ಹುಡುಕಾಟ ನಡೆಸುತ್ತಿತ್ತು.
ಪೊಲೀಸರ ಪ್ರಕಾರ, ಕೊಲೆ ಪ್ರಕರಣದ ಆರೋಪಿ ರಾಜೇಶ್ ಸಣ್ಣ ದ್ವೀಪವೊಂದರಲ್ಲಿ ತಲೆಮರೆಸಿಕೊಂಡಿದ್ದಾರೆ ಎಂಬ ಮಾಹಿತಿ ಪಡೆದು ಆ ದ್ವೀಪವನ್ನು ಸುತ್ತುವರಿದಿದ್ದರು. ವರ್ಕಳ ಸಿಐ ನೇತೃತ್ವದ ಮುಖ್ಯ ತಂಡದ ಭಾಗವಾದ ಮೂವರು ಪೊಲೀಸರ ತಂಡ ದೋಣಿಯಲ್ಲಿತ್ತು. ದೋಣಿಯು ಹಿನ್ನೀರಿನಲ್ಲಿ ಪಲ್ಟಿಯಾಗಿದ್ದು, ಬೋಟ್ಮ್ಯಾನ್ ಮತ್ತು ಇತರ ಮೂವರು ಪೊಲೀಸ್ ಅಧಿಕಾರಿಗಳು ಈಜುವ ಬಚಾವ್ ಆದರೂ ಎಸ್.ಬಾಲು ಕೆಸರಿನಲ್ಲಿ ಸಿಲುಕಿಕೊಂಡರು. ಸುಮಾರು 45 ನಿಮಿಷಗಳ ನಂತರ ಅವರನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸಿದರೂ
ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಬಾಲು ಕೊನೆಯುಸಿರೆಳೆದಿದ್ದಾರೆ ಎಂದು ಹೇಳಿದ್ದಾರೆ.ಮೃತ 27 ವರ್ಷದ ಪೊಲೀಸ್ ಪೇದೆಯಾಗಿ 4 ತಿಂಗಳ ಹಿಂದಷ್ಟೇ ತರಬೇತಿ ಮುಗಿಸಿ ಕೇರಳ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡಿದ್ದರು.
ಪೋತೆನ್ಕೋಡ್ನಲ್ಲಿ ಕಳೆದ ಶನಿವಾರ ನಡೆದ 32 ವರ್ಷದ ಸುಧೀಶ್ ಎಂಬಾತನ ಬರ್ಬರ ಹತ್ಯೆ ಪ್ರಕರಣದ ಮಾಸ್ಟರ್ಮೈಂಡ್ನನ್ನು ಬಂಧಿಸಲು ಪೊಲೀಸ್ ತಂಡ ಹೊರಟಿತ್ತು.ಈ ಘಟನೆಯಲ್ಲಿ ಪೊಲೀಸರು 10 ಮಂದಿಯನ್ನು ಬಂಧಿಸಿದ್ದರೆ, ರಾಜೇಶ್ ಸೇರಿದಂತೆ ಇನ್ನೂ ಇಬ್ಬರು ಪರಾರಿಯಾಗಿದ್ದರು.ಕಿಲ್ಲರ್ ಗ್ಯಾಂಗ್ ಸುಧೀಶ್ ಅವರನ್ನು ಚಾಕು ಮತ್ತು ಕತ್ತಿಗಳಿಂದ ಬರ್ಬರವಾಗಿ ಹತ್ಯೆ ಮಾಡಿ ದೇಹದಿಂದ ತುಂಡರಿಸಿ ಕಾಲನ್ನು ರಸ್ತೆಗೆ ಎಸೆದು ಸಂಭ್ರಮಿಸಿದ್ದು, ಈ ಘಟನೆ ರಾಜ್ಯಾದ್ಯಂತ ತಲ್ಲಣ ಉಂಟುಮಾಡಿತ್ತು.