ಬೆಳಗಾವಿಯಲ್ಲಿ, ಡಿ.18 (DaijiworldNews/HR): ಬೆಳಗಾವಿಯಲ್ಲಿ ಪುಂಡರು ಶಾಂತಿ-ಸೌಹಾರ್ದತೆ ಕದಡುವ ಪ್ರಯತ್ನ ನಡೆಸುತ್ತಿದ್ದಾರೆ. ಎಲ್ಲರೂ ಸಂಯಮ ಹಾಗೂ ಶಾಂತಿ ಕಾಪಾಡುವುದಕ್ಕೆ ಆದ್ಯತೆ ನೀಡುತ್ತಿದ್ದಾರೆ. ಆದರೆ ಸಿದ್ದರಾಮಯ್ಯ ಮಾತ್ರ ಮೊಸರಿನಲ್ಲಿ ಕಲ್ಲು ಹುಡುಕುತ್ತಿದ್ದಾರೆ. ಭಾಷಾಂಧರು ನಡೆಸಿದ ಕೃತ್ಯವನ್ನು ಕೋಮು ಸಂಘರ್ಷಕ್ಕೆ ಪರಿವರ್ತಿಸಲು ಅವರು ಯತ್ನಿಸುತ್ತಿದ್ದಾರೆ" ಎಂದು ಬಿಜೆಪಿ ಆರೋಪಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಕರ್ನಾಟಕದ ಬಿಜೆಪಿ, "ಎಲ್ಲದರಲ್ಲೂ ರಾಜಕೀಯ ಹುಡುಕುವುದೇ ಸಿದ್ದರಾಮಯ್ಯ ಅವರ ಚಾಳಿ. ಎಲ್ಲದಕ್ಕೂ ಸಂದರ್ಭ, ಪ್ರಜ್ಞೆ ಎನ್ನುವುದಿರುತ್ತದೆ. ಬೆಳಗಾವಿಯಲ್ಲಿ ದುಷ್ಕರ್ಮಿಗಳು ನಡೆಸಿದ ಪುಂಡಾಟವನ್ನು ಕೋಮು ದ್ವೇಷಕ್ಕೆ ಪರಿವರ್ತಿಸುವ ಇರಾದೆ ಏಕೆ? ನೆರಮನೆಗೆ ಬೆಂಕಿ ಬಿದ್ದಾಗ ಚಳಿ ಕಾಯಿಸಿಕೊಳ್ಳಲು ಹೊರಟ ನಿಮ್ಮ ದುಷ್ಟಬುದ್ಧಿಗೆ ಧಿಕ್ಕಾರ" ಎಂದು ಹೇಳಿದೆ.
"ಬೆಳಗಾವಿಯಲ್ಲಿ ಕಿಡಿಗೇಡಿಗಳು ನಡೆಸಿದ ಅಹಿತಕರ ಕೃತ್ಯ ಖಂಡನೀಯವಾದುದು. ಸಂಗೊಳ್ಳಿ ರಾಯಣ್ಣ ಹಾಗೂ ಛತ್ರಪತಿ ಶಿವಾಜಿ ಪ್ರತಿಮೆಗೆ ಅಪಮಾನ ಎಸಗಿದ್ದನ್ನು ಯಾರೂ ಸಹಿಸಲು ಸಾಧ್ಯವಿಲ್ಲ. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಭಾಷಾ ಸಾಮರಸ್ಯಕ್ಕೆ ಧಕ್ಕೆ ತಂದವರ ವಿರುದ್ಧ ಸರ್ಕಾರ ದಿಟ್ಟ ಕ್ರಮ ಕೈಗೊಳ್ಳಲಿದೆ" ಎಂದಿದೆ.
ಬೆಳಗಾವಿಯ ಅನಗೋಳದ ಕನಕದಾಸ ಕಾಲೊನಿಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನು ಶನಿವಾರ ಬೆಳಗಿನ ಜಾವ 3ರ ಸುಮಾರಿನಲ್ಲಿ ದುಷ್ಕರ್ಮಿಗಳು ಭಗ್ನಗೊಳಿಸಿ ಮುಖದ ಭಾಗವನ್ನು ವಿರೂಪಗೊಳಿಸಲಾಗಿತ್ತು.