ನವದೆಹಲಿ, ಡಿ.18 (Daijiworld/PY): "18 ವರ್ಷದ ಯುವತಿಯು ದೇಶದ ಪ್ರಧಾನಿಯನ್ನು ಆಯ್ಕೆ ಮಾಡುವ ಹಕ್ಕು ಇದೆ ಎಂದಾದರೆ, ತನ್ನ ಬಾಳಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಲು ತಕರಾರು ಏಕೆ?" ಎಂದು ಕೇಂದ್ರ ಸರ್ಕಾರಕ್ಕೆ ಆಲ್ ಇಂಡಿಯಾ ಮಜ್ಲೀಸ್ ಎ ಇತ್ತೇಹಾದುಲ್ ಮುಸ್ಲಿಮೀನ್ ಸಂಸದ ಅಸಾದುದ್ದೀನ್ ಓವೈಸಿ ತಿರುಗೇಟು ನೀಡಿದ್ದಾರೆ.
"ಮಹಿಳೆಯರ ಅಭಿವೃದ್ದಿಗಾಗಿ ಈ ಸರ್ಕಾರ ಏನೂ ಮಾಡಿಲ್ಲ ಎನ್ನುವುದು ಬಹಿರಂಗವಾಗಿದೆ. 2005ರಲ್ಲಿ ಶೇ.26ರಷ್ಟು ಮಹಿಳೆಯರು ಉದ್ಯೋಗದಲ್ಲಿದ್ದರು. 2020ರಲ್ಲಿ ಅದು ಶೇ.16ಕ್ಕೆ ಇಳಿದಿದೆ" ಎಂದಿದ್ದಾರೆ.
"ಡಾಟಾ ಸಂರಕ್ಷಣಾ ಮಸೂದೆ ಪ್ರಕಾರ, ಡಾಟಾ ಹಂಚಿಕೊಳ್ಳುವ ಹಕ್ಕಿ ನಿಮಗಿದೆ. ಹಾಗಾದರೆ, ಬಾಳಸಂಗಾತಿಯನ್ನು ಏಕೆ ಆಯ್ಕೆ ಮಾಡಿಕೊಳ್ಳಬಾರದು?. ಇದು ಯಾವ ರೀತಿಯಾದ ತರ್ಕ?. ಇದೊಂದು ತಪ್ಪು ಹೆಜ್ಜೆ ಎನ್ನುವುದು ನನ್ನ ನಿಲುವಾಗಿದೆ. ಖಾಸಗಿತನ ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟ್ ಸಹ ಹೇಳಿದೆ" ಎಂದು ತಿಳಿಸಿದ್ದಾರೆ.
"ಇದು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ನಿರಂಕುಶ ಆಡಳಿತಕ್ಕೆ ಉತ್ತಮವಾದ ಉದಾಹರಣೆ. ಭಾರತದ ಪ್ರಜೆಯೊಬ್ಬ 18 ವರ್ಷ ವಯಸ್ಸಿಗೆ ಕರಾರು ಪತ್ರಕ್ಕೆ, ಉದ್ಯಮ ಆರಂಭಿಸಲು ಸಹಿ ಹಾಕಬಹುದಾಗಿದೆ. ಅಲ್ಲದೇ, ಪ್ರಧಾನಿ, ಸಂಸದ, ಶಾಸಕರನ್ನು ಸಹ ಆಯ್ಕೆ ಮಾಡಬಹುದು. ಹಾಗಾಗಿ ಯುವಕರ ವಿವಾಹದ ವಯೋಮಿತಿಯನ್ನು 21ರಿಂದ 18ಕ್ಕೆ ಇಳಿಕೆ ಮಾಡಬೇಕು ಎಂಬುದು ನನ್ನ ಅಭಿಪ್ರಾಯ" ಎಂದಿದ್ದಾರೆ.