ಬೆಂಗಳೂರು, ಡಿ.18 (DaijiworldNews/HR): ಮಧುಕರ ಶೆಟ್ಟಿ ಅಭಿಮನ್ಯ ಇದ್ದ ಹಾಗೆ. ದೇಶದಲ್ಲಿ ಅವರಂತಹವರ ಸಂಖ್ಯೆ ಕಡಿಮೆ ಇದ್ದರೂ ಒಂದು ದಿನ ಭ್ರಷ್ಟಾಚಾರ ನಿರ್ಮೂಲನೆ ಯುದ್ಧದಲ್ಲಿ ಗೆಲುವು ಸಿಗುತ್ತದೆ. ಹಾಗಾಗಿ ಮಧುಕರಶೆಟ್ಟಿ ಅವರ ಜನ್ಮ ದಿನ ಭ್ರಷ್ಟಾಚಾರ ನಿರ್ಮೂಲನ ದಿನವಾಗಿ ರೂಪಾಂತರವಾಗಬೇಕು ಎಂದು ಹೈಕೋರ್ಟ್ ನಿವೃತ್ತ ನ್ಯಾ. ಎನ್. ಕೆ. ಸುಧೀಂದ್ರರಾವ್ ಹೇಳಿದ್ದಾರೆ.
ಡಾ. ಕೆ. ಮಧುಕರಶೆಟ್ಟಿ ಅವರ ಅಭಿಮಾನ ಬಳಗ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಆಯೋಜಿಸಿದ್ದ ದಿ.ಡಾ.ಕೆ. ಮಧುಕರಶೆಟ್ಟಿ ಅವರ 50ನೇ ಜಯಂತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, "ಭ್ರಷ್ಟಾಚಾರ ಮತ್ತು ಜಾತಿ ವ್ಯವಸ್ಥೆ ಎಂಬ ಎರಡು ಕ್ಯಾನ್ಸರ್ಗಳಿಂದ ಸಮಾಜ ನಲುಗುತ್ತಿದ್ದು, ಒಬ್ಬ ವ್ಯಕ್ತಿ ತನ್ನ ಬದಕಿಗೆ ಮೀರಿ ಮಾಡಿದ ಆಸ್ತಿಯೆಲ್ಲವೂ ಅಕ್ರಮ ಆಸ್ತಿಯೇ. ಭ್ರಷ್ಟಾಚಾರ ಮತ್ತು ಜಾತಿ ವ್ಯವಸ್ಥೆ ಎಂಬ ಕ್ಯಾನ್ಸರ್ ತೊಡದು ಹಾಕಬೇಕಾದರೆ ಮಧುಕರಶೆಟ್ಟಿಯಂತಹ ಪ್ರಾಮಾಣಿಕ ವ್ಯಕ್ತಿತ್ವಗಳು ರೂಪಗೊಳ್ಳಬೇಕು" ಎಂದರು.
ಇನ್ನು ದಿವಂಗತ ಎಂಬ ಪದಕ್ಕೆ ಮಧುಕರಶೆಟ್ಟಿ ಅರ್ಹರಾಗಿದ್ದು, ಅವರು ಸ್ವರ್ಗ ಲೋಕದಲ್ಲಿ ಸಿಂಹಾಸನ ರೂಢರಾಗಿರುತ್ತಾರೆ. ನಾನು ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾಗಿ ನಿಯೋಜನೆಗೊಂಡ ವೇಳೆ ಮಧುಕರಶೆಟ್ಟಿ ಭೇಟಿ ಮಾಡಿದ್ದರು. ಭ್ರಷ್ಟಾಚಾರ ಪ್ರಕರಣಗಳ ವಿಚಾರದಲ್ಲಿ ಸಾಕಷ್ಟು ಬಾರಿ ನನ್ನೊಂದಿಗೆ ಚರ್ಚಿಸಿದ್ದರು. ಅವರ ಜನ್ಮ ಜಯಂತಿ ಭ್ರಷ್ಟಾಚಾರ ವಿರೋಧಿ ಆಂದೋಲನವಾಗಿ ರೂಪಾಂತರವಾಗಲಿ" ಎಂದು ಹೇಳಿದ್ದಾರೆ.