ಮುಂಬೈ, ಡಿ.18 (Daijiworld/PY): ನ್ಯೂಯಾರ್ಕ್ ನಗರದಿಂದ ಮರಳಿದ್ದ 29 ವರ್ಷದ ವ್ಯಕ್ತಿಯಲ್ಲಿ ಒಮಿಕ್ರಾನ್ ತಳಿ ಕೊರೊನಾ ವೈರಸ್ ಇರುವುದು ಶುಕ್ರವಾರ ದೃಢಪಟ್ಟಿದೆ ಎಂದು ಬೃಹನ್ ಮುಂಬೈ ಮಹಾನಗರ ಪಾಲಿಕೆ ಹೇಳಿದೆ.
ಈ ವ್ಯಕ್ತಿಯಲ್ಲಿ ಯಾವುದೇ ಸೋಂಕಿನ ಲಕ್ಷಣಗಳಿಲ್ಲ. ಅಮೇರಿಕಾದಲ್ಲಿ ಈ ವ್ಯಕ್ತಿ ಫೈಜರ್ ಲಸಿಕೆಯ ಮೂರು ಡೋಸ್ಗಳನ್ನು ಪಡೆದಿದ್ದರು ಎಂದು ಹೇಳಿದೆ.
ಡಿ.9ರಂದು ಅಮೇರಿಕಾದಿಂದ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ ಅವರನ್ನು ಪರೀಕ್ಷೆಗೆ ಒಳಪಡಿಸಿದ ಸಂದರ್ಭ ಅವರಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿತ್ತು. ನಂತರ ಅವರ ಮಾದರಿಗಳನ್ನು ಜಿನೋಮ್ ಸೀಕ್ವೆನ್ಸಿಂಗ್ಗಾಗಿ ಪುಣೆಯಲ್ಲಿನ ರಾಷ್ಟ್ರೀಯ ವೈರಾಣು ಸಂಸ್ಥೆಗೆ ರವಾನಿಸಲಾಗಿತ್ತು. ಆ ವ್ಯಲ್ತಿಯ ನಿಕಟ ಸಂಪರ್ಕದಲ್ಲಿದ್ದ ಇಬ್ಬರಲ್ಲಿ ಕೊರೊನಾ ವೈರಸ್ ನೆಗೆಟಿವ್ ಬಂದಿತ್ತು.
ಮುನ್ನೆಚ್ಚರಿಕಾ ನಿಟ್ಟಿನಲ್ಲಿ ರೋಗಿಯನ್ನು ಆಸ್ಪತ್ರೆಯೊಂದಕ್ಕೆ ದಾಖಲಿಸಿದ್ದು, ಅವರಲ್ಲಿ ಯಾವುದೇ ರೋಗ ಲಕ್ಷಣಗಳಿಲ್ಲ ಎಂದು ಬಿಎಂಸಿ ಹೇಳಿಕೆಯಲ್ಲಿ ತಿಳಿಸಿದೆ.
ಇದರಿಂದ ಮುಂಬೈನಲ್ಲಿ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ 15ಕ್ಕೆ ಏರಿದೆ. ಈ ಪೈಕಿ ಐವರು ಮುಂಬೈಯ ಹೊರವಲಯದವರು. ಇದರಲ್ಲಿ 13 ಮಂದಿ ಈಗಾಗಲೇ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ಧಾರೆ. 15 ಮಂದಿಯ ಪೈಕಿ ಯಾರೊಬ್ಬರಲ್ಲೂ ಗಂಭೀರ ಲಕ್ಷಣಗಳು ಕಂಡುಬಂದಿಲ್ಲ ಎಂದಿದೆ.
ಮಹಾರಾಷ್ಟ್ರದಲ್ಲಿ ದೇಶದಲ್ಲಿ ಅತಿ ಹೆಚ್ಚು ಒಮಿಕ್ರಾನ್ ಪ್ರಕರಣಗಳು ವರದಿಯಾಗಿವೆ. ಒಟ್ಟು 40 ಒಮಿಕ್ರಾನ್ ಪ್ರಕರಣಗಳು ದಾಖಲಾಗಿವೆ. ಶುಕ್ರವಾರ 8 ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ ಆರು ಪುಣೆ, ಒಂದು ಮುಂಬೈ ಹಾಗೂ ಒಂದು ಪ್ರಕರಣ ಕಲ್ಯಾಣ್ ಡೊಂಬಿವಿಲಿಯಲ್ಲಿ ವರದಿಯಾಗಿವೆ. ಇವರೆಲ್ಲರೂ ಸಂಪೂರ್ಣ ಡೋಸ್ಗಳನ್ನು ಪಡೆದವರಾಗಿದ್ದಾರೆ.
ನ್ಯೂಯಾಕ್ನಿಂದ ಬಂದ ವ್ಯಕ್ತಿ ಅಮೇರಿಕಾದಲ್ಲಿ ನೀಡಲಾಗುತ್ತಿರುವ ಫೈಜರ್ ಲಸಿಕೆಯ ಬೂಸ್ಟರ್ ಡೋಸ್ ಅನ್ನು ಸಹ ಪಡೆದಿದ್ದರು. ಕಲ್ಯಾಣ್ ಡೊಂಬಿವಿಲಿಯ ಪ್ರಕರಣದ ವ್ಯಕ್ತಿ ನೈಜೀರಿಯಾದಿಂದ ಮರಳಿದವರಾಗಿದ್ದಾರೆ.
ಎಲ್ಲಾ ಸೋಂಕಿತರು ಪುರುಷರಾಗಿದ್ದು, 29-45 ವರ್ಷ ವಯಸ್ಸಿನವರಾಗಿದ್ದಾರೆ. ಒಬ್ಬರಲ್ಲಿ ಮಾತ್ರವೇ ಲಘು ಲಕ್ಷಣಗಳಿವೆ. ಎಂಟು ಮಂದಿಯಲ್ಲಿ ಇಬ್ಬರು ಮಾತ್ರ ಆಸ್ಪತ್ರೆಯಲ್ಲಿದ್ದಾರೆ. ರಾಜ್ಯದ ಒಟ್ಟು 40 ಪ್ರಕರಣಗಳಲ್ಲಿ 33 ಮಂದಿ ಸಂಪೂರ್ಣ ಲಸಿಕೆಗಳನ್ನು ಪಡೆದವರಾಗಿದ್ಧಾರೆ. ಈಗಾಗಲೇ ಸುಮಾರು 25 ಮಂದಿ ಬಿಡುಗಡೆಯಾಗಿದ್ದಾರೆ.