ಬೆಂಗಳೂರು, ಡಿ.18 (Daijiworld/PY): ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಮುತ್ತಪ್ಪ ರೈ ಆಸ್ತಿ ಮಾರಾಟಕ್ಕೆ ಹೈ ಕೋರ್ಟ್ ತಡೆಯಾಜ್ಞೆ ನೀಡಿದೆ.
ಮುತ್ತಪ್ಪ ರೈ ಪುತ್ರರಾದ ರಾಖಿ ರೈ, ರಿಕ್ಕಿ ರೈ ಸೇರಿದಂತೆ 20 ಮಂದಿಯನ್ನು ಪ್ರತಿವಾದಿಯನ್ನಾಗಿಸಿ ತಡೆಯಾಜ್ಞೆ ನೀಡಿದೆ.
ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಸಿವಿಲ್ ಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಮುತ್ತಪ್ಪ ರೈ ಅವರ ಎರಡನೇ ಪತ್ನಿ ಅನುರಾಧ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಕೆ ಎಸ್ ಮುದಗಲ್ ಅವರಿದ್ದ ಪೀಠ, ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿದಾರರು ಆಕ್ಷೇಪಿಸಿರುವ ನಿರ್ದಿಷ್ಟ ಆಸ್ತಿಗಳನ್ನು ನ್ಯಾಯಾಲಯದ ಮುಂದಿನ ಆದೇಶದವರೆಗೆ ವರ್ಗಾವಣೆ ಮಾಡದಂತೆ ಮಧ್ಯಂತರ ಆದೇಶ ಮಾಡಿದೆ.
ಮುತ್ತಪ್ಪ ರೈ ಅವರ ಎರಡನೇ ಪತ್ನಿ ಅನುರಾಧ ಪತಿಯ ಆಸ್ತಿಯಲ್ಲಿ ಮೂರನೇ ಒಂದು ಪಾಲು ಕೋರಿ ಸಿವಿಲ್ ಕೋರ್ಟ್ನಲ್ಲಿ ಕೇಸು ದಾಖಲಿಸಿದ್ದರು. ಈ ನಡುವೆ ಮುತ್ತಪ್ಪ ರೈ ಪುತ್ರರಾದ ರಾಕಿ ರೈ ಹಾಗೂ ರಿಕ್ಕಿ ರೈ ಕೆಲವು ಆಸ್ತಿ ಮಾರಾಟ ಮಾಡಿದ್ದರು. ಆಸ್ತಿ ಮಾರಾಟ ಮಾಡದಂತೆ ನೀಡಿದ್ದ ತಡೆಯಾಜ್ಞೆಯನ್ನು ಸಿವಿಲ್ ಕೋರ್ಟ್ ಇತ್ತೀಚೆಗೆ ತೆರವು ಮಾಡಿತ್ತು. ಇದನ್ನು ಪ್ರಶ್ನಿಸಿ ಅನುರಾಧ ಹೈಕೋರ್ಟ್ ಮೆಟ್ಟಿಲೇರಿದ್ದರು.
ಅನುರಾಧ ಅವರ ಅರ್ಜಿ ಪರಿಗಣಿಸಿ ಕೋರ್ಟ್ ಯಾವುದೇ ಆಸ್ತಿ ಮಾರಾಟ ಮಾಡದಂತೆ ತಡೆಯಾಜ್ಞೆ ನೀಡಿ ಮಧ್ಯಂತರ ತೀರ್ಪು ಪ್ರಕಟಿಸಿದೆ.
ಮಾಜಿ ಭೂಗತ ದೊರೆ ಮುತ್ತಪ್ಪ ರೈ ಅವರು 2020ರ ಮೇ ತಿಂಗಳಿನಲ್ಲಿ ಕ್ಯಾನ್ಸರ್ನಿಂದ ಸಾವನ್ನಪ್ಪಿದ್ದರು.