ಹುಬ್ಬಳ್ಳಿ, ಡಿ.18 (Daijiworld/PY): "ಬೆಳಗಾವಿಯಲ್ಲಿ ನಡೆದ ಪುಂಡಾಟಿಕೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಕಿಡಿಗೇಡಿಗಳನ್ನು ಮಟ್ಟಹಾಕಲು ಕಠಿಣ ಕ್ರಮಕ್ಕೆ ಸೂಚನೆ ನೀಡಿದ್ದೇನೆ" ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ಧಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾಷ್ಟ್ರ ನಾಯಕರ ಪ್ರತಿಮೆಗಳನ್ನು ಅವಮಾನ ಮಾಡುವುದನ್ನು ಸಹಿಸಲು ಆಗುವುದಿಲ್ಲ. ರಾಷ್ಟ್ರ ನಾಯಕರ ಪ್ರತಿಮೆಗಳಿಗೆ ಗೌರವ ನೀಡುವುದು ಮುಖ್ಯ. ಸಮಾಜದಲ್ಲಿ ಕ್ಷೋಭೆ ಸೃಷ್ಟಿಸಲು ಮುಂದಾದರೆ ಅಂತಹ ಯತ್ನಗಳಿಗೆ ಅವಕಾಶ ನೀಡುವುದಿಲ್ಲ" ಎಂದು ತಿಳಿಸಿದ್ದಾರೆ.
"ಆರೋಪಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಈಗಾಗಲೇ ಹಲವರನ್ನು ಬಂಧಿಸಲಾಗಿದೆ. ಸಾರ್ವಜನಿಕ ಆಸ್ತಿ ಹಾನಿ ಮಾಡುವುದು ಕಾನೂನುಬಾಹಿರ. ಪುಂಡಾಟಿಕೆ ಹಿಂದೆ ಹಲವು ಕಾರಣಗಳಿವೆ. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ಧೇನೆ" ಎಂದಿದ್ದಾರೆ.
"ಪೊಲೀಸರಿಗೆ ದೀರ್ಘಾವಧಿ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದೇನೆ. ಇದು ಪುನರಾವರ್ತನೆ ಆಗದಂತೆ ಸೂಚನೆ ನೀಡಿದ್ದೇನೆ" ಎಂದು ತಿಳಿಸಿದ್ಧಾರೆ.
"ಬೆಳಗಾವಿಯಲ್ಲಿ ಅಧಿವೇಶನ ನಡೆಯುವ ಸಂದರ್ಭ ಈ ರೀತಿಯಾದ ಘಟನೆ ನಡೆಯುವುದರ ಹಿಂದೆ ಹಲವು ಕಾರಣ ಇರಬಹುದು ಇದೆಲ್ಲದರ ಕುರಿತು ಪರಿಶೀಲಿಸಿ ಕಠಿಣ ಕ್ರಮ ತೆಗದುಕೊಳ್ಳಲಾಗುವುದು" ಎಂದಿದ್ದಾರೆ.