ತಿರುವನಂತಪುರ, ಡಿ 18 (DaijiworldNews/MS): ಮಹಿಳೆಯರ ವಿವಾಹದ ಕಾನೂನುಬದ್ಧ ವಯಸ್ಸನ್ನು 18 ರಿಂದ 21 ವರ್ಷಕ್ಕೆ ಹೆಚ್ಚಿಸುವ ಕೇಂದ್ರದ ಕ್ರಮವನ್ನು ಕೇರಳದ ಹಲವು ಮುಸ್ಲಿಂ ಸಂಘಟನೆಗಳು ವಿರೋಧಿಸಿವೆ.
ಇದೊಂದು ಕೋಮು ದೃಷ್ಟಿಕೋನದಿಂದ ಕೂಡಿದ ಹೊಸ ಕಾನೂನಾಗಿದ್ದು, ಸಂಘ ಪರಿವಾರದ ನೆಚ್ಚಿನ ಅಜೆಂಡಾವಾದ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ದೂರಿದೆ. ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು ಮದುವೆ, ವಿಚ್ಛೇದನ ಮತ್ತು ಆಸ್ತಿಯ ಹಕ್ಕನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸುತ್ತದೆ ಮತ್ತು ವಿವಾಹದ ವಯಸ್ಸನ್ನು ಏರಿಸುವುದು ಲಿವ್-ಇನ್ ಸಂಬಂಧಗಳು ಮತ್ತು ನ್ಯಾಯಸಮ್ಮತವಲ್ಲದ ಸಂಬಂಧಗಳಿಗೆ ದಾರಿ ಮಾಡಿಕೊಡುತ್ತದೆ ಎಂದು ಹೇಳಿದೆ
ಮುಸ್ಲಿಂ ಲೀಗ್ನ ಮಹಿಳಾ ವಿಭಾಗ, ಸುನ್ನಿ ವಿದ್ವಾಂಸರ ಸಂಘಟನೆಯಾದ ಸಮಸ್ತ ಕೇರಳ ಜಮೈತ್-ಉಲ್-ಉಲೇಮಾ ಮತ್ತು ಇತರ ಅನೇಕ ಮುಸ್ಲಿಂ ಧಾರ್ಮಿಕ ಸಂಘಟನೆಗಳು ಮುಖ್ಯವಾಗಿ ತೀವ್ರವಾಗಿ ವಿರೋಧಿಸಿದೆ. ಇನ್ನು ಮುಸ್ಲಿಂ ಸಂಸ್ಥೆಗಳ ವಿರೋಧಕ್ಕೆ ಸಿಪಿಐ(ಎಂ)ನ ಮಹಿಳಾ ವಿಭಾಗ, ಅಖಿಲ ಭಾರತ ಪ್ರಜಾಸತ್ತಾತ್ಮಕ ಮಹಿಳಾ ಸಂಘ (ಎಐಡಿಡಬ್ಲ್ಯುಎ) ಬೆಂಬಲ ನೀಡಿವೆ.
ಇನ್ನು ಕೇರಳ ಕ್ಯಾಥೋಲಿಕ್ ಬಿಷಪ್ಸ್ ಕೌನ್ಸಿಲ್, ಲಿಂಗ ತಾರತಮ್ಯವಿಲ್ಲದೆ ಮದುವೆಯ ವಯಸ್ಸಿನಲ್ಲಿ ಏಕರೂಪತೆಯನ್ನು ತರುವ ನಿರ್ಧಾರವನ್ನು ಶ್ಲಾಘಿಸಿದ್ದು, ಮಹಿಳೆಯರು 21 ರ ವರ್ಷದಲ್ಲಿ ತಮ್ಮ ಪದವಿಯನ್ನು ಪೂರ್ಣಗೊಳಿಸಲು ಅವಕಾಶ ಸಿಗುತ್ತದೆ ಇದು ಪ್ರಬುದ್ಧ ಸಂಬಂಧ ಮತ್ತು ಆರೋಗ್ಯಕರ ಕುಟುಂಬಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಹೇಳಿದೆ.