ಬೆಂಗಳೂರು, ಡಿ 18 (DaijiworldNews/MS): ಬೆಳಗಾವಿಯ ಪುಂಡಾಟದ ಹಿಂದೆ ದೊಡ್ಡ ಹುನ್ನಾರವಿದ್ದು, ಬೆಳಗಾವಿಯ ಭಯೋತ್ಪಾದಕ ಪುಂಡರನ್ನು ಕೂಡಲೇ ಬೇಟೆಯಾಡಿ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಬೆಳಗಾವಿಯಲ್ಲಿ ವಾಹನಗಳ ಮೇಲೆ ಕಲ್ಲು ತೂರಾಟ ಹಾಗೂ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಪ್ರತಿಮೆ ಭಗ್ನ ಮಾಡಿರುವ ಘಟನೆಯನ್ನು ಖಂಡಿಸಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ, "ಬೆಳಗಾವಿಯಲ್ಲಿ ಕಳೆದ ರಾತ್ರಿ ಪುಂಡರು ಪೊಲೀಸ್ ವಾಹನಗಳಿಗೆ ಹಾನಿ ಮಾಡಿ ಬೆಂಕಿ ಹಚ್ಚಿರುವುದು ಅಕ್ಷಮ್ಯ. ವಿಧಾನಮಂಡಲ ಅಧಿವೇಶನಕ್ಕೆ ಹೋಗಲು ಪಾಸ್ ಅಂಟಿಸಲಾಗಿದ್ದ ವಾಹನಗಳನ್ನೇ ಗುರಿ ಮಾಡಲಾಗಿದೆ. ಕನ್ನಡಿಗರ ಹೆಮ್ಮೆ ಸಂಗೊಳ್ಳಿ ರಾಯಣ್ಣರ ಪ್ರತಿಮೆ ಹಾಳು ಮಾಡಿರುವುದು ಕ್ಷಮಾರ್ಹವಲ್ಲದ ಅಪರಾಧ. ಖಂಡನೀಯ.ಬೆಳಗಾವಿಯಲ್ಲಿ ಪ್ರಕ್ಷುಬ್ಧತೆ ಸೃಷ್ಟಿಸಿ ಭಾಷಾ ವೈಷಮ್ಯ ಹೆಚ್ಚಿಸುವುದು ದುರುಳರ ಉದ್ದೇಶವಿದ್ದಂತಿದೆ. ಶಾಂತಿಯನ್ನು ಕದಡಿ ಜನರಲ್ಲಿ ಭಯಭೀತಿ ಉಂಟು ಮಾಡಲು ಪುಂಡರನ್ನು ಪ್ರಚೋದಿಸಿದವರನ್ನು ಹೊರಗೆಳೆದು ಶಿಕ್ಷಿಸಬೇಕು. ಈ ಪುಂಡಾಟದ ಹಿಂದೆ ದೊಡ್ಡ ಹುನ್ನಾರವೇ ಇರುವಂತಿದೆ" ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.
"ಬೆಳಗಾವಿ ವಿವಾದ ಮುಗಿದ ಅಧ್ಯಾಯ. ಆದಾಗ್ಯೂ ಕೆಲ ವಿಚ್ಛಿಧ್ರಕಾರಿ ಶಕ್ತಿಗಳು ಆ ಭಾಗದಲ್ಲಿ ಅಶಾಂತಿ ಸೃಷ್ಟಿಸುತ್ತ ಕನ್ನಡಿಗರು-ಮರಾಠಿಗರ ನಡುವೆ ವೈಷಮ್ಯಕ್ಕೆ ಕಾರಣವಾಗುತ್ತಿದ್ದಾರೆ. ಅಂಥ ಶಕ್ತಿಗಳನ್ನು ಸರಕಾರ ಮೂಲೋತ್ಪಾಟನೆ ಮಾಡಬೇಕು. ಪುಂಡರನ್ನು ಕೂಡಲೇ ಬೇಟೆಯಾಡಿ ಇನ್ನೆಂದೂ ಅಂಥ ತಪ್ಪು ಮಾಡದಂತೆ ತಕ್ಕಶಾಸ್ತಿ ಮಾಡಬೇಕು" ಎಂದು ಒತ್ತಾಯಿಸಿದ್ದಾರೆ.
" ಸರಕಾರಿ ಕಾರುಗಳನ್ನು ಗುರಿ ಮಾಡಿರುವುದು ರಾಜ್ಯ ಸರಕಾರವನ್ನೇ ಗುರಿ ಮಾಡಿದಂತೆ. ಸಂಗೊಳ್ಳಿ ರಾಯಣ್ಣ ಪ್ರತಿಮೆ ಮೇಲೆ ದಾಳಿ ಮಾಡಿರುವುದು ಕನ್ನಡಿಗರ ಮೇಲೆ, ಕರ್ನಾಟಕದ ಮೇಲೆ ದಾಳಿಗೆ ಸಮ. ಸರಕಾರ ಈ ಘಟನೆಯನ್ನು ಲಘುವಾಗಿ ಪರಿಗಣಿಸಬಾರದು. ಕೂಡಲೇ ಆ ದುರುಳರಿಗೆ ಕನ್ನಡಿಗರ ಶಕ್ತಿ ಏನೆಂಬುದನ್ನು ತೋರಿಸಬೇಕು. ಬೆಳಗಾವಿಯಲ್ಲಿಭಯೋತ್ಪಾದನೆ ಸೃಷ್ಟಿಸುತ್ತಿರುವ ಈ ದುಷ್ಟಶಕ್ತಿಗಳಿಗೆ ಕನ್ನಡಿಗರು ಹೆದರುವುದಿಲ್ಲ. ತಕ್ಕಪಾಠ ಕಲಿಸುವ ಕಾಲ ಸನ್ನಿಹಿತವಾಗಿದೆ" ಎಂದು ಎಚ್ಚರಿಸಿದ್ದಾರೆ.