ಬೆಂಗಳೂರು, ಡಿ.18 (Daijiworld/PY): ಅತ್ಯಾಚಾರವನ್ನು ಆನಂದಿಸಿ ಎಂಬ ರಮೇಶ್ ಕುಮಾರ್ ಹೇಳಿಕೆಗೆ ಕಿಡಿಕಾರಿರುವ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, "ರಮೇಶ್ ಕುಮಾರ್ ಅವರು ಪ್ರಜಾಪ್ರಭುತ್ವದ ದೇವಾಲಯದ ಪಾವಿತ್ರ್ಯತೆಯನ್ನು ಅವಮಾನಿಸಿದ್ದಾರೆ. ಅವರನ್ನು ಸುವರ್ಣಸೌಧ ಪ್ರವೇಶಿಸಲು ಬಿಡಬಾರದು" ಎಂದಿದ್ದಾರೆ.
"ಆರು ಬಾರಿ ಶಾಸಕರಾಗಿ ಆಯ್ಕೆಯಾಗಿರುವವರ ಮನಸ್ಥಿತಿ ಕಂಡು ಬೇಸರವಾಗುತ್ತಿದೆ. ರಮೇಶ್ ಕುಮಾರ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಕಿತ್ತೊಗೆಯಬೇಕು" ಎಂದು ಆಗ್ರಹಿಸಿದ್ದಾರೆ.
"ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಸಹ ಕ್ಷಮೆಯಾಚಿಸಿದ್ದು, "ನಿನ್ನೆ ನಡೆದ ಕಲಾಪದಲ್ಲಿ ನಮ್ಮದೇ ಶಾಸಕರೊಬ್ಬರು ಆಡಿದ ಮಾತನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ. ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ನಾಗಿರುವ ನನಗೆ ಕಾಂಗ್ರೆಸ್ ಶಾಸರೊಬ್ಬರು ಈ ರೀತಿಯ ಮಾತುಗಳನ್ನಾಡಿದ್ದಕ್ಕೆ ಬೇಸರವಾಗಿದೆ. ಕರ್ನಾಟಕದ ಎಲ್ಲಾ ಮಹಿಳೆಯರು ಕ್ಷಮಿಸಿಬಿಡಿ. ಈ ರೀತಿಯ ಮಾತುಗಳು ಎಂದಿಗೂ ಪುನರಾವರ್ತನೆಯಾಗದಂತೆ ನಾನು ಖಚಿತಪಡಿಸುತ್ತೇನೆ" ಎಂದಿದ್ದಾರೆ.
"ಶಾಸಕರ ಹೇಳಿಕೆ ಖಂಡನೀಯ" ಎಂದು ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿ ಸಂಸದ ರಾಜ್ಯವರ್ಧನ್ ರಾಥೋಡ್ ತಿಳಿಸಿದ್ದಾರೆ.
"ಕಲಾಪದ ಸಂದರ್ಭ ರಮೇಶ್ ಕುಮಾರ್ ಅವರು ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದಾಗ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ನಗುತ್ತಿದ್ದರು. ಇದನ್ನೂ ಬೇರೆ ರೀತಿಯಲ್ಲಿ ಊಹಿಸಿಕೊಳ್ಳಬಾರದು ಎಂದಿದ್ದಾರೆ. ರಮೇಶ್ ಕುಮಾರ್ ಅವರು ಮಾತನಾಡುತ್ತಿದ್ದ ಸಂದರ್ಭ ವಿಶ್ವೇಶ್ವರ ಕಾಗೇರಿ ಅವರು ನಗುತ್ತಾ ಕುಳಿತಿದ್ದದ್ದು ಖಂಡನೀಯ" ಎಂದು ಬಿಜೆಪಿ ಸಂಸದ ಅಪರಾಜಿತಾ ಸಾರಂಗಿ ಹೇಳಿದ್ದಾರೆ.