ಮೇಲುಕೋಟೆ, ಡಿ.18 (Daijiworld/PY): ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇಗುಲದ ಗರ್ಭಗುಡಿ ಬಾಗಿಲ ಮುಂದೆ ಯುವಕ ಬೆತ್ತಲಾಗಿ ನಿಂತು ಹುಚ್ಚಾಟ ಮಾಡಿದ್ದಾನೆ.
ದೇವಾಲಯದ ಮುಂದೆ ಚುರುಮುರಿ ಮಾರಾಟ ಮಾಡಿ ಜೀವನ ನಿರ್ವಹಿಸುತ್ತಿದ್ದ ರಾಮ್ ಕುಮಾರ್ ಎಂಬಾತನೇ ಈ ಹುಚ್ಚಾಟ ನಡೆಸಿದ್ದು, ಈತನ ಹುಚ್ಚಾಟಕ್ಕೆ ಗಾಂಜಾ ಸೇವನೆಯೇ ಕಾರಣ ಎಂದು ನಾಗರೀಕರು ಹಾಗೂ ದೇವಾಲಯದ ಸಿಬ್ಬಂದಿಗಳು ಆರೋಪಿಸಿದ್ದಾರೆ.
ಇತ್ತೀಚೆಗೆ ರಾಮ್ ಕುಮಾರ್ ಆಮ್ ಆದ್ಮಿ ಪಾರ್ಟಿಗೆ ಸೇರ್ಪಡೆಯಾಗಿದ್ದು, ಜಿಲ್ಲಾಧ್ಯಕ್ಷನಾಗಿ ಪದಗ್ರಹಣ ಮಾಡಿರುವುದಾಗಿ, ಮಂಡ್ಯ ಜಿಲ್ಲಾ ಕಚೇರಿ ತೆರೆದಿರುವುದಾಗಿ ಹೇಳಿಕೊಳ್ಳುತ್ತಿದ್ದ ಎನ್ನಲಾಗಿದೆ.
ಇತ್ತೀಚೆಗೆ ಗಾಂಜಾ ದಾಸನಾಗಿದ್ದ ಈತ, ಕಳೆದ ಒಂದು ವಾರದಿಂದ ರಾತ್ರಿ ವೇಳೆಯಲ್ಲಿ ಹುಚ್ಚಾಟ ನಡೆಸುತ್ತಿದ್ದ. ಈತನಿಗೆ ಆಗಾಗ ಸಾರ್ವಜನಿಕರು ಕೂಡಾ ಬುದ್ದಿವಾದ ಹೇಳಿ ಮನೆಗೆ ಕಳುಹಿಸಿದ್ದರು ಎನ್ನಲಾಗಿದೆ. ಗುರುವಾರ ರಾತ್ರಿ ಈತ ದೇವಾಲಯ ಮುಕ್ತವಾಗುತ್ತಿದ್ದಂತೆ ಏಕಾಏಕಿ ದೇವಾಲಯದ ಶುಕನಾಸಿಗೆ ಪ್ರವೇಶಿಸಿದ್ದು, ನಾನು ಚೆಲುವನಾರಾಯಣಸ್ವಾಮಿಯ ತಮ್ಮ ಅವನ ಪಕ್ಕದಲ್ಲೇ ನಾನು ನಿಲ್ಲುತ್ತೇನೆ ಎಂದಿದ್ದಾನೆ.
ನಾನೇ ರಾಮ, ನಾನೇ ಅಲ್ಲ ಎಂದು ಆಕ್ರೋಶದಿಂದ ಕಿರುಚಾಡುತ್ತಾ ಸಿಬ್ಬಂದಿಯನ್ನು ಬೆದರಿಸಿದ್ದು, ದೇವಾಲಯದ ಸಿಬ್ಬಂದಿಗಳಲ್ಲಿ ಆತನನ್ನು ಹೊರ ಹಾಕಲು ಯತ್ನಿಸಿದ್ದಾರೆ. ಆದರೆ, ಈ ಸಂದರ್ಭ ಆತ ಬಟ್ಟೆಬಿಟ್ಟಿ ಬೆತ್ತಾಲಾಗಿ ಹುಚ್ಚಾಟ ನಡೆಸಿದ್ದಾನೆ. ಈ ವೇಳೆ ದೇವಾಲಯದ ಸಿಬ್ಬಂದಿ ರಾಮ್ ಕುಮಾರ್ ಅನ್ನು ಹೊರಹಾಕಿದ್ದಾರೆ.
ಈ ವಿಚಾರದ ಬಗ್ಗೆ ಮಾಹಿತಿ ತಿಳಿದ ಮೇಲುಕೋಟೆ ಇನ್ಸ್ಪೆಕ್ಟರ್ ಸುಮಾರಾಣಿ ಪೊಲೀಸರನ್ನು ಸ್ಥಳಕ್ಕೆ ಕಳುಹಿಸಿದ್ದಾರೆ. ಪೊಲೀಸರ ಮುಂದೆಯೂ ಸಹ ಬಟ್ಟೆಹಾಕಿಕೊಳ್ಳದೇ ದೇವಾಲಯಕ್ಕೆ ನುಗ್ಗಲು ಯತ್ನಿಸಿದ್ದಾನೆ. ಈ ವೇಳೆ ಆತನನ್ನು ಬಲವಂತದಿಂದ ಮನೆಗೆ ಕಳುಹಿಸಲಾಗಿದೆ. ಘಟನೆಯ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿದೆ.
ಘಟನೆಯ ಬಗ್ಗೆ ದೇವಾಲಯದ ಇಒ ಮಂಗಳಮ್ಮ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಘಟನೆಯ ಕುರಿತು ಕಾನೂನು ಕ್ರಮ ಜರುಗಿಸುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.
ಮೇಲುಕೋಟೆಯಲ್ಲಿ ಗಾಂಜಾ ಸೇವನೆ ವಿಚಾರ ಕೇಳಿ ಬರುತ್ತಿದೆ. ರಾಮ್ ಕುಮಾರ್ ಗಾಂಜಾ ಸೇವಿಸಿದ್ದಾನೆ ಎನ್ನುವ ಆರೋಪವಿದೆ. ಪೊಲೀಸರು ಸೂಕ್ತವಾದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಜರುಗಿಸಿ ಕ್ಷೇತ್ರ ಹಾಗೂ ದೇವಾಲಯದ ಪಾವಿತ್ರ್ಯತೆ ಕಾಪಾಡಬೇಕು ಎಂದು ದೇವಾಲಯ ಪರಿಚಾರಕ ಎಂ ಎನ್ ಪಾರ್ಥಸಾರಥಿ ಒತ್ತಾಯಿಸಿದ್ದಾರೆ.