ನವದೆಹಲಿ, ಡಿ.17 (Daijiworld/PY): "ಕಾಂಗ್ರೆಸ್ ಶಾಸಕರು ತಮಾಷೆ ಮಾಡಿದರೆ, ಬಿಜೆಪಿಗರು ನಗುತ್ತಾರೆ. ಇಬ್ಬರೂ ಮಹಿಳಾ ದ್ವೇಷಿ ವರ್ತನೆ ತೋರಿರುವುದು ಅವಮಾನಕರ" ಎಂದು ಕಾಂಗ್ರೆಸ್ ಮುಖಂಡೆ ಶರ್ಮಿಷ್ಠಾ ಮುಖರ್ಜಿ ಹೇಳಿದ್ದಾರೆ.
ರಮೇಶ್ ಕುಮಾರ್ ಹೇಳಿಕೆ ಬಗ್ಗೆ ಕಾಂಗ್ರೆಸ್ ಪಕ್ಷವನ್ನು ಟೀಕಿಸಿರುವ ಬಿಜೆಪಿ, "ಈ ವಿಷಯದಲ್ಲಿ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರ ಮೌನವನ್ನು ಪ್ರಶ್ನಿಸಿತ್ತು. ಮಹಿಳೆಯರ ಕುರಿತು ಈ ರೀತಿಯಾದ ಅಪಮಾನದ ಹೇಳಿಕೆ ನೀಡಿರುವ ಇತಿಹಾಸವನ್ನು ಕಾಂಗ್ರೆಸ್ ಪಕ್ಷದ ನಾಯಕರು ಹೊಂದಿದ್ದಾರೆ" ಎಂದು ದೂರಿದೆ.
"ರಮೇಶ್ ಕುಮಾರ್ ಅವರ ಅತ್ಯಾಚಾರದ ಹೇಳಿಕೆಗೆ ಆಕ್ಷೇಪಿಸದೇ ನಗುತ್ತಿದ್ದ ಬಿಜೆಪಿ ಪಕ್ಷದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ತನ್ನದೇ ಪಕ್ಷದ ವಕ್ತಾರ ಅಪರಾಜಿತ ಸಾರಂಗಿ ಟೀಕೆ ಮಾಡಿದಾಗ ಮುಜುಗರ ಪಡುವಂತಾಯಿತು. ಆ ರೀತಿಯಾದ ಆಕ್ಷೇಪಾರ್ಹ ಹೇಳಿಕೆ ನೀಡಿದರೂ ಸಹ ಏನೂ ಪ್ರತಿಕ್ರಿಯೆ ನೀಡದ್ದು ದುಃಖಕರವಾದದ್ದು" ಎಂದಿದ್ದಾರೆ.
"ಅತ್ಯಾಚಾರದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದಿದ್ದರೆ, ಮಲಗಿ ಆನಂದ ಪಡಬೇಕು" ಎಂದು ಸದನದಲ್ಲಿ ರಮೇಶ್ ಕುಮಾರ್ ಹೇಳಿದ್ದರು.
ಈ ಹೇಳಿಕೆ ವಿವಾದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಟ್ವೀಟ್ ಮಾಡಿರುವ ರಮೇಶ್ ಕುಮಾರ್ ಅವರು, "ತಮ್ಮ ಹೇಳಿಕೆಗೆ ಎಲ್ಲರಲ್ಲಿಯೂ ಕ್ಷಮೆಯಾಚಿಸುತ್ತೇನೆ. ಮುಂದೆ ನಾನು ನನ್ನ ಮಾತುಗಳಲ್ಲಿ ಎಚ್ಚರ ವಹಿಸುತ್ತೇನೆ" ಎಂದಿದ್ದಾರೆ.