ಬೆಂಗಳೂರು, ಡಿ.17 (Daijiworld/PY): "ಕಾಂಗ್ರೆಸ್ ಶಾಸಕ ಹಾಗೂ ಸ್ಪೀಕರ್ ವರ್ತನೆಯನ್ನು ಪಕ್ಷ ಒಪ್ಪುವುದಿಲ್ಲ" ಎಂದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ತಿಳಿಸಿದ್ದಾರೆ.
ಶಾಸಕ ರಮೇಶ್ ಕುಮಾರ್ ಅತ್ಯಾಚಾರದ ಬಗ್ಗೆ ನೀಡಿರುವ ವಿವಾದಾತ್ಮಕ ಹೇಳಿಕೆ ಕುರಿತು ಟ್ವೀಟ್ ಮಾಡಿರುವ ಅವರು, "ಹಿರಿಯ ಕಾಂಗ್ರೆಸ್ ಶಾಸಕರಿಂದ ವ್ಯಕ್ತವಾದ ಹೆಚ್ಚು ಆಕ್ಷೇಪಾರ್ಹ ಹಾಗೂ ಮತಿಹೀನ ಹೇಳಿಕೆ ಹಾಗೂ ಅದಕ್ಕೆ ವಿಧಾನಸಭಾಧ್ಯಕ್ಷ ಪ್ರತಿಕ್ರಿಯಿಸಿದ ರೀತಿಯನ್ನು ಕಾಂಗ್ರೆಸ್ ಪಕ್ಷ ಒಪ್ಪಿಕೊಳ್ಳುವುದಿಲ್ಲ" ಎಂದಿದ್ದಾರೆ.
"ಸಭಾಧ್ಯಕ್ಷರು ಹಾಗೂ ಹಿರಿಯ ಶಾಸಕರು ಮಾದರಿಯಾಗಿರಬೇಕು. ಅಂತ ಸ್ವೀಕಾರಾರ್ಹವಲ್ಲದ ನಡವಳಿಕೆಯಿಂದ ದೂರವಿರಬೇಕು" ಎಂದು ಹೇಳಿದ್ದಾರೆ.
"ಅತ್ಯಾಚಾರದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದಿದ್ದರೆ, ಮಲಗಿ ಆನಂದ ಪಡಬೇಕು" ಎಂದು ಸದನದಲ್ಲಿ ರಮೇಶ್ ಕುಮಾರ್ ಹೇಳಿದ್ದರು.
ದೆರ್ ಈಸ್ ಎ ಸೇಯಿಂಗ್, ವೆನ್ ರೇಪ್ ಈಸ್ ಇನೆವಿಟೆಬಲ್ ಲೆಟ್ ಲೇಡೌನ್ ಅಂಡ್ ಎಂಜಾಯ್( ರೇಪ್ ಆಗುವಾಗ ತಡೆಯಲು ಆಗದಿದ್ದರೆ ಮಲಗಿಕೊಂಡು ಎಂಜಾಯ್ ಮಾಡಬೇಕು) ಎಂದು ಹೇಳಿದ್ದರು. ಇದಕ್ಕೆ ಸ್ವೀಕರ್ ನಕ್ಕುಬಿಟ್ಟಿದ್ದರು.
ಈ ಹೇಳಿಕೆ ವಿವಾದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಟ್ವೀಟ್ ಮಾಡಿರುವ ರಮೇಶ್ ಕುಮಾರ್ ಅವರು, "ತಮ್ಮ ಹೇಳಿಕೆಗೆ ಎಲ್ಲರಲ್ಲಿಯೂ ಕ್ಷಮೆಯಾಚಿಸುತ್ತೇನೆ. ಮುಂದೆ ನಾನು ನನ್ನ ಮಾತುಗಳಲ್ಲಿ ಎಚ್ಚರ ವಹಿಸುತ್ತೇನೆ" ಎಂದಿದ್ದಾರೆ.