ಸಾತ್ನಾ, ಡಿ.17 (Daijiworld/PY): ಆನ್ಲೈನ್ ತರಗತಿಯಲ್ಲಿದ್ದ ಸಂದರ್ಭ ಮೊಬೈಲ್ ಫೋನ್ ಸ್ಪೋಟಗೊಂಡು 15 ವರ್ಷದ ಬಾಲಕ ತೀವ್ರವಾಗಿ ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ ಸಾತ್ನಾ ಜಿಲ್ಲೆಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾತ್ನಾ ಜಿಲ್ಲಾ ಕೇಂದ್ರದಿಂದ 35 ಕಿ.ಮೀ. ದೂರದಲ್ಲಿರುವ ಚಂದ್ ಕುಯಿಯಾ ಹಳ್ಳಿಯಲ್ಲಿ ಈ ಘಟನೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
8ನೇ ತರಗತಿ ವಿದ್ಯಾರ್ಥಿ ರಾಮ್ ಪ್ರಕಾಶ್ ಬದೌರಿಯಾ, ಆನ್ಲೈನ್ ತರಗತಿಯಲ್ಲಿದ್ದಾಗ ಏಕಾಏಕಿ ಮೊಬೈಲ್ ಫೋನ್ ಸ್ಪೋಟಗೊಂಡಿದೆ. ಇದರ ಪರಿಣಾಮ ಆತನ ಹಲ್ಲಿನ ದವಡೆ ಗಾಯದ ಸಮಸ್ಯೆಯಿಂದ ನರಳುತ್ತಿರುವುದಾಗಿ ನಾಗೋದ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆರ್ ಪಿ ಮಿಶ್ರಾ ಫೋನ್ ಮೂಲಕ ಹೇಳಿರುವುದಾಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಬಾಲಕನ ಪೋಷಕರು ಕೆಲಸದ ನಿಮಿತ್ತ ಮನೆಯಿಂದ ಹೊರಗೆ ಹೋಗಿದ್ದರು. ಬಾಲಕ ಒಬ್ಬನೇ ಇದ್ದಾಗ ಈ ಘಟನೆ ಸಂಭವಿಸಿದೆ. ಮೊಬೈಲ್ ಫೋನ್ ಸ್ಪೋಟಗೊಂಡು ನೆರೆಹೊರೆಯವರು ಬಂದು ನೋಡಿದ ವೇಳೆ ಮೊಬೈಲ್ ಸ್ಪೋಟಗೊಂಡಿರುವುದು ತಿಳಿದುಬಂದಿದೆ.
ಬಾಲಕನಿಗೆ ಜಬಲ್ಪುರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಸಾತ್ನ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.