ಚಿಕ್ಕಮಗಳೂರು, ಡಿ 17 (DaijiworldNews/MS): ಹಿಂದುಗಳು ಬೇರೆ ಧರ್ಮಕ್ಕೆ ಮತಾಂತರವಾದರೆ ಅಂಬೇಡ್ಕರ್, ಬುದ್ಧನಿಗೆ ಎಲ್ಲಿ ಜಾಗ ಸಿಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ.ರವಿ ಪ್ರಶ್ನಿಸಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಹಿಂದುಗಳು ಕ್ರೈಸ್ತರಾಗಿ ಮತಾಂತರವಾದರೆ ಸಿದ್ದರಾಮಯ್ಯನವರಿಗೆ ಎಲ್ಲಿ ಜಾಗ ಇರುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.
ಮತಾಂತರ ವಿಚಾರ ಮತ ಗಳಿಕೆಗಾಗಿ ಇರುವ ವಿಚಾರವಲ್ಲ, ಮತಾಂತರ ದೇಶಾಂತರಕ್ಕೆ ಸಮನಾಗಿರುತ್ತದೆ ಎಂಬ ಮಾತು ಮಹಾತ್ಮ ಗಾಂಧೀಜೀಯೇ ಹೇಳಿದ್ದರು. ಗೋಡ್ಸೆ ಹಿಂದುತ್ವ ಅಲ್ಲ, ನಮ್ಮದು ಗಾಂಧೀಜಿ ಹಿಂದುತ್ವ ಎಂದು ಪದೇ ಪದೇ ಎನ್ನುವ ಕಾಂಗ್ರೆಸ್ಸಿಗರು, ಸಿದ್ದರಾಮಯ್ಯ ಒಮ್ಮೆ ಇತಿಹಾಸ ಓದಲಿ ಎಂದು ಸಲಹೆ ನೀಡಿದರು.
ಹಿಂದೂಗಳು ಬೌದ್ಧರು, ವೈಷ್ಣವರಾದರೆ ಅಂಬೇಡ್ಕರ್, ರಾಮನಿಗೆ ಜಾಗ ಸಿಗುತ್ತದೆ. ಜೈನರ ಮನೆಯಲ್ಲಿ ರಾಮ, ಗಣಪತಿಗೆ ಜಾಗ ಇದೆ. ಆದರೆ ಇಸ್ಲಾಮಿಗೆ ಪರಿವರ್ತನೆಯಾದರೆ ಅಂಬೇಡ್ಕರ್, ಬುದ್ಧನಿಗೂ ಜಾಗವಿಲ್ಲ ಎಂದು ಇದೇ ವೇಳೆ ಹೇಳಿದರು.