ಬೆಂಗಳೂರು, ಡಿ. 17 (DaijiworldNews/HR): ಪದವಿ ಹಂತದಲ್ಲಿ ಕನ್ನಡ ಭಾಷೆ ವಿಷಯವನ್ನು ಆಯ್ಕೆ ಮಾಡಿಕೊಳ್ಳಲು ಇಷ್ಟವಿಲ್ಲದ ವಿದ್ಯಾರ್ಥಿಗಳಿಗೆ ಕನ್ನಡ ಕಲಿಕೆ ಕಡ್ಡಾಯ ಮಾಡಬಾರದು ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪ್ರಾದೇಶಿಕ ಭಾಷೆಗಳ ಕಡ್ಡಾಯ ಕಲಿಕೆಗೆ ಅವಕಾಶ ನೀಡಿಲ್ಲ. ಎನ್ಇಪಿ ಜಾರಿ ವೇಳೆ ಪದವಿ ಹಂತದಲ್ಲಿ ಕಡ್ಡಾಯ ಕನ್ನಡ ಕಲಿಕೆಗೆ ಅವಕಾಶ ಕೊಡಬೇಕು ಎಂದು ಕನ್ನಡ ಪ್ರಾಧ್ಯಾಪಕ ವರ್ಗ ಸರ್ಕಾರವನ್ನು ಆಗ್ರಹಿಸಿದ್ದು, ಕನ್ನಡ ಪ್ರಾಧ್ಯಾಪಕರ ಹೋರಾಟಕ್ಕೆ ಒಪ್ಪಿಗೆ ನೀಡಿದ ರಾಜ್ಯ ಸರ್ಕಾರ ಪದವಿ ಹಂತದಲ್ಲಿ ಕಡ್ಡಾಯ ಕನ್ನಡ ಭಾಷೆಯನ್ನು ಕಲಿಯಬೇಕು ಎಂದು ಆದೇಶ ಹೊರಡಿಸಿತ್ತು.
ಇನ್ನು ಸರ್ಕಾರದ ಈ ಆದೇಶವನ್ನು ಪ್ರಶ್ನಿಸಿ ಸಂಸ್ಕೃತ ಭಾರತಿ ಟ್ರಸ್ಟ್, ಸಂಸ್ಕೃತ ಪ್ರಾಧ್ಯಾಪಕರ ಸಂಘ, ಶ್ರೀ ಹಯಗ್ರೀವಾ ಟ್ರಸ್ಟ್ ಮತ್ತಿತರ ಸಂಸ್ಥೆಗಳು ಪದವಿ ಹಂತದಲ್ಲಿ ಕನ್ನಡ ಭಾಷೆ ಕಡ್ಡಾಯ ಕಲಿಕೆ ರಾಜ್ಯ ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದವು.
ವಿದ್ಯಾರ್ಥಿಗಳು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾ. ರಿತು ರಾಜ್ ಅವಸ್ಥಿ ಮತ್ತು ನ್ಯಾ. ಸಚಿನ್ ಶಂಕರ್ ಮಗದಮ್, ನೇತೃತ್ವದ ಪೀಠ ಮಧ್ಯಂತರ ಆದೇಶ ನೀಡಿದ್ದು, ಪದವಿ ಹಂತದಲ್ಲಿ ಕನ್ನಡ ಭಾಷಾ ವಿಷಯವನ್ನು ಆಯ್ಕೆ ಮಾಡಿಕೊಳ್ಳಲು ಬಯಸದ ವಿದ್ಯಾರ್ಥಿಗಳಿಗೆ ನ್ಯಾಯಾಲಯದ ಮುಂದಿನ ಆದೇಶದ ವರೆಗೆ ಕನ್ನಡ ಕಲಿಕೆ ಕಡ್ಡಾಯ ಮಾಡದಂತೆ ಹೈಕೋರ್ಟ್ ನಿರ್ದೇಶಿಸಿದೆ.